ಅಮೆರಿಕ ಅಧ್ಯಕ್ಷ- ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಯುತ್ತಿದ್ದು, ವಿಶ್ವದ ಗಮನ ಸೆಳೆದಿದೆ. ಅಚ್ಚರಿಯ ಬೆಳವಣಿಗೆಯಲ್ಲಿ ಅಮೆರಿಕ ಉಪಾಧ್ಯಕ್ಷ ಸ್ಥಾನದ ಅಭ್ಯರ್ಥಿ ಕಮಲಾ ಹ್ಯಾರಿಸ್ ಅವರ ಪ್ರಚಾರದ ನೂರಾರು ಬ್ಯಾನರ್‌ಗಳು ತಮಿಳುನಾಡಿನ ಒಂದು ಗ್ರಾಮದಲ್ಲಿ ಕಾಣಿಸಿಕೊಂಡಿದೆ.
ತಮಿಳುನಾಡು ರಾಜಧಾನಿ ಚೆನ್ನೈನಿಂದ 320 ಕಿಲೋಮೀಟರ್ ದಕ್ಷಿಣಕ್ಕಿರುವ ತಲುಸೇಂದ್ರಪುರ ಗ್ರಾಮದಲ್ಲಿ ಕಮಲಾ ಹ್ಯಾರೀಸ್ ಅವರ ಅಜ್ಜ ಶತಮಾನದ ಹಿಂದೆ ಜನಿಸಿದ್ದರಂತೆ.
ಹೀಗಾಗಿ ಕಮಲಾ ಹ್ಯಾರಿಸ್ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದ ಇಲ್ಲಿನ ಗ್ರಾಮಸ್ಥರು ಡಜನ್‌ಗಟ್ಟಲೆ ಬ್ಯಾನರ್ ಗಳನ್ನು ಕಟ್ಟಿದ್ದಾರೆ, ತಲಸೇಂದ್ರಪುರಂನಿಂದ ಅಮೆರಿಕಕ್ಕೆ ಎಂಬ ಶೀರ್ಷಿಕೆ ಹೊಂದಿದ ಕಮಲಾ ಹ್ಯಾರೀಸ್ ಫೋಟೋವನ್ನು ಒಳಗೊಂಡ ಬ್ಯಾನರ್ ಇದೀಗ ಗಮನಸೆಳೆಯುತ್ತಿದೆ. ಕಮಲ ಹ್ಯಾರಿಸ್ ಅವರ ಚುನಾವಣಾ ಯಶಸ್ಸನ್ನು ಬಯಸುತ್ತೇವೆ ಎಂದು ಅಲ್ಲಿನ ಜನರು ಹೇಳಿಕೊಂಡಿದ್ದಾರೆ.
ಹ್ಯಾರಿಸ್ ಅವರ ಅಜ್ಜ ಪಿವಿ ಗೋಪಾಲನ್ ತೊಂಬತ್ತು ವರ್ಷಗಳ ಹಿಂದೆ ಈ ಗ್ರಾಮದಿಂದ ಚೆನ್ನೈಗೆ ವಲಸೆ ಹೋದರು. ಬಳಿಕ ಅಲ್ಲಿ ಅವರು ಉನ್ನತ ಸರ್ಕಾರಿ ಅಧಿಕಾರಿಯಾಗಿ ನಿವೃತ್ತಿಯಾದರು.
ಭಾರತೀಯ ಮೂಲದ ತಾಯಿ ಮತ್ತು ಜಮೈಕಾದ ತಂದೆಗೆ ಹ್ಯಾರಿಸ್ ಜನಿಸಿದ್ದರು. ಒಮ್ಮೆ ತಂದೆ – ತಾಯಿ ತಮ್ಮ ಮಗು ಕಮಲಾರನ್ನು ತಲಸೇಂದ್ರಪುರಂಗೆ ಕರೆತಂದಿದ್ದರಂತೆ.
ಶ್ವೇತಭವನದ ಬ್ಯಾಕ್ ಗ್ರೌಂಡ್‌ನಲ್ಲಿ ಕಮಲಾ ಹ್ಯಾರಿಸ್ ನಗುಮೊಗದ ಫೋಟೋ ಇರುವ ಒಂದು ಬ್ಯಾನರ್ ಹಳ್ಳಿಯ ಬಸ್ ನಿಲ್ದಾಣದಲ್ಲಿ ಹಾಕಿದ್ದು ಗಮನ ಸೆಳೆಯುತ್ತಿದೆ.