ಕನ್ಯಾಕುಮಾರಿ: ನೌಕರಿ ಕೊಡಿಸಿದ ದೇವರ ಹರಕೆ ತೀರಿಸಲು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
ಬ್ಯಾಂಕ್ ನಲ್ಲಿ ಕೆಲಸ ಸಿಕ್ಕ ಖುಷಿಯಲ್ಲಿ ದೇವರ ಹರಕೆ ತೀರಿಸಲು ರೈಲ್ವೆ ಹಳಿ ಮೇಲೆ ಮಲಗಿದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 32 ವರ್ಷದ ನವೀನ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ ಎಂದು ಗುರುತಿಸಲಾಗಿದೆ.
ಓದು ಪೂರ್ಣಗೊಂಡ ನಂತರ ನವೀನ್ ಗೆ ಕೆಲಸ ಸಿಕ್ಕಿರಲಿಲ್ಲ. ಕೆಲಸ ದೊರೆತರೆ ಪ್ರಾಣ ಅರ್ಪಿಸುವುದಾಗಿ ದೇವರಲ್ಲಿ ಹರಕೆ ಕಟ್ಟಿಕೊಂಡಿದ್ದ. ಆತನಿಗೆ ಬ್ಯಾಂಕ್ ಆಫ್ ಇಂಡಿಯಾ ಮುಂಬೈ ಶಾಖೆಯಲ್ಲಿ ಕೆಲಸ ಸಿಕ್ಕಿದ್ದು 15 ದಿನಗಳ ಹಿಂದೆ ಕೆಲಸಕ್ಕೆ ಸೇರಿಕೊಂಡಿದ್ದ. ಬಳಿಕ ಆತ ಹರಕೆ ತೀರಿಸಲು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಆತನ ಬಳಿ ದೊರೆತ ನೋಟ್ ನಲ್ಲಿ ಈ ಮಾಹಿತಿ ಗೊತ್ತಾಗಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.