ಚೆನ್ನೈ: ತಮಿಳುನಾಡಿನಲ್ಲಿ ಕೊರೊನಾ ಸೋಂಕು ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿರ್ಧಾರ ಕೈಗೊಂಡಿದೆ.
ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ 4 ಜಿಲ್ಲೆಗಳಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಗೆ ಮುಂದಾಗಿದೆ. ಚೆನ್ನೈ, ಕಾಂಚಿಪುರಂ, ಚೆಂಗಲ್ಪಟ್ಟು, ತಿರುವಳ್ಳೂರು ಜಿಲ್ಲೆಗಳಲ್ಲಿ ಜೂನ್ 19 ರಿಂದ 30ರವರೆಗೆ ಸಂಪೂರ್ಣ ಲಾಕ್ಡೌನ್ ಜಾರಿ ಮಾಡಲಾಗುವುದು. ಈ ದಿನಗಳ ಅವಧಿಯಲ್ಲಿ ಯಾವುದೇ ವಿನಾಯಿತಿ ಇರುವುದಿಲ್ಲ.
ದೇಶದಲ್ಲಿಯೇ ಎರಡನೇ ಅತಿ ಹೆಚ್ಚು ಪ್ರಕರಣ ತಮಿಳುನಾಡಿನಲ್ಲಿ 44661 ಪ್ರಕರಣ ನಿನ್ನೆಯವರೆಗೂ ದಾಖಲಾಗಿದ್ದು 430 ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಮುಖ್ಯಮಂತ್ರಿ ಪಳನಿಸ್ವಾಮಿ ಮತ್ತು ಹಿರಿಯ ಸಚಿವರು, ಅಧಿಕಾರಿಗಳೊಂದಿಗೆ ತಜ್ಞರ ಸಮಿತಿ ಸಭೆ ನಡೆಸಿದ ನಂತರ ಸೋಂಕು ತಡೆಯುವ ನಿಟ್ಟಿನಲ್ಲಿ ಲಾಕ್ಡೌನ್ ಜಾರಿಗೆ ನಿರ್ಧಾರ ಕೈಗೊಳ್ಳಲಾಗಿದೆ.
ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲಿದ್ದು, ಈ ಅವಧಿಯಲ್ಲಿ ವೈದ್ಯಕೀಯ, ಔಷಧ ಅಗತ್ಯ ಸೇವೆ ಇರುತ್ತವೆ. ತುರ್ತುಪರಿಸ್ಥಿತಿಯನ್ನು ಹೊರತುಪಡಿಸಿ ಬಾಡಿಗೆ ಕ್ಯಾಬ್, ಆಟೋ ಸೇವೆ ಇರಲ್ಲ. ಸರ್ಕಾರಿ ಕಚೇರಿಗಳಲ್ಲಿ ಮೂರನೇ ಒಂದು ಭಾಗದಷ್ಟು ಉದ್ಯೋಗಿಗಳೊಂದಿಗೆ ಕೆಲಸ ಮಾಡಬಹುದು. ಬ್ಯಾಂಕುಗಳು ಜೂನ್ 29, 30 ರಂದು ಕಾರ್ಯನಿರ್ವಹಿಸಲಿದ್ದು, ತರಕಾರಿ ಮತ್ತು ಕಿರಾಣಿ ಅಂಗಡಿಗಳಿಗೆ ಬೆಳಗ್ಗೆ 6 ರಿಂದ 2 ಗಂಟೆಗೆ ವರೆಗೆ ಅವಕಾಶ ನೀಡಲಾಗಿದೆ.
ಹೋಟೆಲ್ ಗಳಲ್ಲಿ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 8 ಗಂಟೆಯವರೆಗೆ ಪಾರ್ಸೆಲ್ ಗೆ ಮಾತ್ರ ಅನುಮತಿ ಇರುತ್ತದೆ. ಪಡಿತರ, ಅಗತ್ಯ ವಸ್ತುಗಳು, ಮೊಬೈಲ್ ಅಂಗಡಿಗಳು ಬೆಳಗ್ಗೆ 8 ಗಂಟೆಯಿಂದ ಮಧ್ಯಾಹ್ನ 2 ಗಂಟೆಗೆ ಕಾರ್ಯ ನಿರ್ವಹಿಸಲಿದ್ದು, ಯಾವುದೇ ಚಹಾ ಅಂಗಡಿ ತೆರೆಯುವುದಿಲ್ಲ. ಎಲೆಕ್ಟ್ರಾನಿಕ್ ಮಾಧ್ಯಮಗಳಿಗೆ ಅನುಮತಿ ಇದೆ. ಅಮ್ಮಾ ಕ್ಯಾಂಟೀನ್ ಮತ್ತು ಸಮುದಾಯ ಅಡುಗೆ ಮನೆಗಳು ಕಾರ್ಯನಿರ್ವಹಿಸಲಿವೆ.