ಊರುಗಳ ಹೆಸರನ್ನು ಅವುಗಳ ದೇಶೀ ಹೆಸರುಗಳಿಗೆ ಮರುನಾಮಕರಣ ಮಾಡುವ ಕೆಲಸಕ್ಕೆ ಈಗ ತಮಿಳುನಾಡು ಸರ್ಕಾರ ಮುಂದಾಗಿದ್ದು, ಇಂಗ್ಲೀಷ್‌ನಲ್ಲಿ Coimbatore ಆಗಿದ್ದ ಕೊಯಮತ್ತೂರು ಈಗ ‘Koyampuththoor’ ಆಗಲಿದೆ.
ತಮಿಳು ಉಚ್ಛಾರಣೆಯನ್ನು ಸಂರಕ್ಷಿಸುವ ನಿಟ್ಟಿನಲ್ಲಿ ರಾಜ್ಯಾದ್ಯಂತ 1018 ಸ್ಥಳಗಳ ಹೆಸರುಗಳನ್ನು ಮರು ನಾಮಕರಣ ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ಕೊಯಮತ್ತೂರು ಜಿಲ್ಲೆ ಒಂದರಲ್ಲೇ 40 ಊರುಗಳ ಹೆಸರುಗಳ ಇಂಗ್ಲಿಷ್ ಸ್ಪೆಲ್ಲಿಂಗ್ ಅನ್ನು ಬದಲಾಯಿಸಲಾಗುತ್ತಿದೆ.
ತಮಿಳು ಉಚ್ಛಾರಣೆಯಂತೆಯೇ ಇಂಗ್ಲೀಷ್‌ನಲ್ಲಿ ಅಕ್ಷರಗಳನ್ನು ಪೋಣಿಸುವ ನಿಟ್ಟಿನಲ್ಲಿ 37 ಪುಟಗಳ ಅಧಿಸೂಚನೆಯನ್ನು ತಮಿಳುನಾಡು ಸರ್ಕಾರ ಬಿಡುಗಡೆ ಮಾಡಿದೆ. ಏಪ್ರಿಲ್ 1ರಂದೇ ಈ ಸಂಬಂಧ ಘೋಷಣೆ ಮಾಡಲಾಗಿದ್ದರೂ, ಬುಧವಾರ ಈ ಸಂಬಂಧ ಅಧಿಕೃತ ಘೋಷಣೆ ಮಾಡಲಾಗಿದೆ.