ಕೊಲ್ಕತ್ತಾ: ಟಿಎಂಸಿ ಹಿರಿಯ ನಾಯಕರಾಗಿದ್ದ ಸುವೆಂದು ಅಧಿಕಾರಿ ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾಗಿದ್ದು, ಮೊದಲ ಸಾರ್ವಜನಿಕ ಸಭೆಯಲ್ಲೇ ಅವರ ಮೇಲೆ ಟಿಎಂಸಿ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಂಘಟನೆಗೆ ಸುವೆಂದು ಅಧಿಕಾರಿ ಸಾಥ್ ನೀಡಿದ್ದಾರೆ. ಪಕ್ಷದ ಕಾರ್ಯಕರ್ತರೊಂದಿಗೆ ತೆಂಗಾದ ಜಾನಕಿನಾಥ ದೇವಾಲಯಕ್ಕೆ ಪೂರ್ವಮಿಡ್ನಾಪುರ್ ಜಿಲ್ಲೆಯ ನಂದಿಗ್ರಾಮದ ಮೂಲಕ ಹಾದು ಹೋಗುವಾಗ ಟಿಎಂಸಿ ಕಾರ್ಯಕರ್ತರು ಹಲ್ಲೆ ಮಾಡಿದ್ದಾರೆ.
2007 ರಲ್ಲಿ ಪಶ್ಚಿಮಬಂಗಾಳದ ನಂದಿಗ್ರಾಮದಲ್ಲಿ ಕೃಷಿ ಭೂಮಿ ಸ್ವಾಧೀನ ವಿರೋಧಿ ಹೋರಾಟ ನಡೆದಿತ್ತು. ಈ ಹೋರಾಟದ ಮೂಲಕವೇ ಸುವೆಂದು ಅಧಿಕಾರಿ ನಾಯಕನಾಗಿ ಹೊರಹೊಮ್ಮಿದ್ದರು. ಅಂದು ಹೋರಾಟದ ಕೇಂದ್ರಬಿಂದುವಾಗಿದ್ದ ನಂದಿಗ್ರಾಮದಲ್ಲಿ ಸುವೆಂದು ಅಧಿಕಾರಿಯವರನ್ನು ಸ್ವಾಗತಿಸಲು ಬಿಜೆಪಿ ಕಾರ್ಯಕರ್ತರು ಸೇರಿದ್ದರು.
ಬಿಜೆಪಿ ಸೇರಿದ ಸುವೆಂದು ಅಧಿಕಾರಿ ತಮ್ಮ ಮೊದಲ ಸಾರ್ವಜನಿಕ ಸಭೆಯನ್ನು ನಂದಿಗ್ರಾಮದಲ್ಲಿ ನಡೆಸಲು ಮುಂದಾಗಿದ್ದರು. ಆದರೆ, ಇದೇ ವೇಳೆಯಲ್ಲಿ ಟಿಎಂಸಿ ಕಾರ್ಯಕರತರು ದಾಳಿ ಮಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಘಟನೆಯ ಬಗ್ಗೆ ಬಿಜೆಪಿ ನಾಯಕರು ಆಡಳಿತ ಪಕ್ಷದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.