ಸೂರತ್ ಮೂಲದ ಕಿರಿಪ್ರತಿಮೆಗಳ ಕಲಾವಿದರೊಬ್ಬರು ಅಡಿಕೆಗಳನ್ನು ಬಳಸಿ ಕಲಾಕೃತಿಗಳನ್ನು ಮಾಡುವ ಮೂಲಕ ಲಾಕ್‌ಡೌನ್ ಅವಧಿಯನ್ನು ಅರ್ಥಪೂರ್ಣವಾಗಿ ಕಳೆದಿದ್ದಾರೆ.
ಪವನ್ ಶರ್ಮಾ ಹೆಸರಿನ ಈ ವ್ಯಕ್ತಿ, ದೇವತೆಗಳಾದ ಶ್ರೀರಾಮಚಂದ್ರ, ಗಣೇಶರ ಪ್ರತಿಮೆಗಳಲ್ಲದೇ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕಲಾಕೃತಿಯನ್ನು ಸಹ ಅಡಿಕೆಯಲ್ಲಿ ಕೆತ್ತಿದ್ದಾರೆ.
ಆರಂಭದಲ್ಲಿ ಒಂದೇ ಒಂದು ಅಕ್ಷರವನ್ನು ಕೆತ್ತಲು ಮೂರು ಗಂಟೆ ಹಿಡಿಯುತ್ತಿದ್ದದ್ದು ಈಗ 15 ನಿಮಿಷಗಳಲ್ಲಿ ಮುಗಿಯುತ್ತಿದೆ ಎಂದು ಪವನ್ ಶರ್ಮಾ ತಿಳಿಸಿದ್ದಾರೆ.
“ಕ್ವಾರಂಟೈನ್ ಅವಧಿಯನ್ನು ಸೂಕ್ತವಾಗಿ ಬಳಸಿಕೊಳ್ಳಲು ಈ ಹವ್ಯಾಸವನ್ನು ಆರಂಭಿಸಿದೆ. ಇದುವರೆಗೂ ಅಡಿಕೆಗಳನ್ನು ಬಳಸಿಕೊಂಡು 60 ಕಲಾಕೃತಿಗಳನ್ನು ರಚಿಸಿದ್ದೇನೆ. ವಿಳ್ಳೇದೆಲೆ ಡಬ್ಬಗಳು, ಕಾಂಚ್ ಶೆಲ್ ಸ್ಟಾಂಡ್‌ಗಳು ಹಾಗೂ ನೀರಿನ ಕುಂಡಗಳ ಕಿರುಕಲಾಕೃತಿಗಳನ್ನು ಸಹ ರಚಿಸಿದ್ದೇನೆ” ಎಂದು ಪವನ್ ತಿಳಿಸಿದ್ದಾರೆ.