ಕೃಷಿ ಕ್ಷೇತ್ರದ ಸಂಬಂಧ ಕೇಂದ್ರ ಸರ್ಕಾರ ತಂದಿರುವ ಮೂರು ಹೊಸ ಕಾನೂನುಗಳ ವಿರುದ್ಧವಾಗಿ ದೆಹಲಿಯ ಗಡಿಗಳಲ್ಲಿ ಪಂಜಾಬ್ ಹಾಗೂ ಹರಿಯಾಣಾದ ರೈತರು ಪ್ರತಿಭಟನೆ ನಡೆಸುತ್ತಿರುವುದು ದೇಶದ ಎಲ್ಲ ಮಾಧ್ಯಮಗಳಲ್ಲಿ ರಾರಾಜಿಸುತ್ತಿದೆ.
ಇದೇ ವೇಳೆ, ಇದೇ ಕಾನೂನುಗಳು ರೈತರ ಪರವಾಗಿದ್ದು, ಮಧ್ಯವರ್ತಿಗಳ ಕಪಿಮುಷ್ಠಿಯಿಂದ ರೈತರನ್ನು ಕಾಪಾಡಿ, ಎಪಿಎಂಸಿ ಮಂಡಿಗಳ ಆಚೆಗೂ ಸಹ ತಮಗೆ ಸಿಗುವ ಪೈಪೋಟಿಯುತ ಬೆಲೆಗೆ ಉತ್ಪನ್ನಗಳನ್ನು ಮಾರಿಕೊಳ್ಳಲು ನೆರವಾಗಲಿವೆ ಎಂದು ದೊಡ್ಡ ಸಂಖ್ಯೆಯಲ್ಲಿ ರೈತ ಪರ ಸಂಘಟನೆಗಳು ಸುಪ್ರೀಂ ಕೋರ್ಟ್‌ನಲ್ಲಿ ತಮ್ಮ ಬೆಂಬಲ ಸೂಚಿಸಿವೆ.
ದೇಶಾದ್ಯಂತ 30 ಲಕ್ಷಕ್ಕೂ ಅಧಿಕ ಸದಸ್ಯರಿದ್ದಾರೆ ಎನ್ನಲಾದ ಭಾರತೀಯ ಕಿಸಾನ್ ಸಂಘ, 15 ಲಕ್ಷ ಸದಸ್ಯರು ಇದ್ದಾರೆ ಎನ್ನಲಾದ ಭಾರತೀಯ ರೈತರ ಒಕ್ಕೂಟದ ಪ್ರತಿನಿಧಿಗಳು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಎ.ಎಸ್. ಬೋಪಣ್ಣ ಹಾಗೂ ವಿ. ರಮಸುಬ್ರಮಣಿಯನ್ ಇದ್ದ ತ್ರಿಸದಸ್ಯ ಪೀಠದ ಎದುರು ತಮ್ಮ ವಾದ ಮುಂದಿಟ್ಟು, ಈ ಕಾನೂನುಗಳು ರೈತರ ಹಿತಾಸಕ್ತಿಯನ್ನು ಬಲಪಡಿಸುತ್ತವೆ ಎಂದಿದ್ದಾರೆ.
ನ್ಯಾಯಾಲಯದ ಅಂಗಳದಲ್ಲಿ ರೈತರ ವಿವಿಧ ಸಂಘಟನೆಗಳ ಈ ಜಟಾಪಟಿಯ ಕುರಿತಂತೆ ಮಾತನಾಡಿದ ಬೊಬ್ಡೆ, “ಪ್ರತಿಯೊಂದು ಸಂಘವೂ ಲಕ್ಷಾಂತರ ರೈತರ ಪ್ರತಿನಿಧಿಯೆಂದು ಹೇಳುತ್ತಿರುವುದನ್ನು ನೋಡಿದರೆ, ದೇಶದ ಜನಸಂಖ್ಯೆಗಿಂತ ರೈತ ಸಂಘಟನೆಗಳ ಸದಸ್ಯರ ಸಂಖ್ಯೆಯೇ ಜೋರಾಗಿದೆ ಎನಿಸುತ್ತದೆ,” ಎಂದಿದ್ದಾರೆ.
ಪರಿಸ್ಥಿತಿ ಹೀಗೇ ಮುಂದುವರೆದರೆ ಏನಾಗಬಹುದು ಎಂಬ ಅಂದಾಜು ಕೊಟ್ಟ ಹಿರಿಯ ವಕೀಲರಾದ ಪಿ.ಎಸ್. ನರಸಿಂಹ, “ಕೃಷಿ ಸುಧಾರಣಾ ಕಾಯಿದೆಗಳ ಪರವಾಗಿ ನಿಂತಿರುವ ಮಂದಿ ಸಿಂಘು ಗಡಿಯಲ್ಲಿ ಪ್ರತಿಭಟಿಸುತ್ತಿರುವವರಿಗಿಂತ ದೊಡ್ಡ ಧರಣಿಗಳನ್ನು ನಡೆಸಲು ಶಕ್ತರಾಗಿದ್ದಾರೆ. ಕಾಯಿದೆಗಳಿಗೆ ಬೆಂಬಲ ಕೊಡುತ್ತಿರುವ ರೈತರು ಸಹ ದೆಹಲಿಯ ಇತರ ಗಡಿಗಳನ್ನು ಬ್ಲಾಕ್ ಮಾಡಲು ಆರಂಭಿಸಿದರೆ ಏನಾಗಬಹುದು?” ಎಂದು ಕೇಳಿದ್ದಾರೆ.