ತೆಲಂಗಾಣದ ಭೋಂಗಿರ್ ನಲ್ಲಿ ಚಲಿಸುವ ರೈಲಿಗೆ ತಲೆಕೊಟ್ಟು 37 ವರ್ಷದ ಸರ್ಕಾರಿ ನೌಕರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶನಿವಾರ ಮಧ್ಯಾಹ್ನ ಘಟನೆ ನಡೆದಿದ್ದು ಮಾಹಿತಿ ತಿಳಿದು ಸ್ಥಳಕ್ಕೆ ಧಾವಿಸಿದ ಭೋಂಗಿರ್ ಠಾಣೆ ಪೊಲೀಸರು ಪರಿಶೀಲನೆ ನಡೆಸಿದಾಗ 5 ವರ್ಷದ ಮಗಳ ಸಾವಿನಿಂದ ಮನನೊಂದ ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಶಂಕಿಸಲಾಗಿದೆ.
ಮೃತ ವ್ಯಕ್ತಿಯ ಪತ್ನಿ ಕರುಣಾಕರ್ ಎಂಬುವರೊಂದಿಗ ಗೆಳೆತನ ಬೆಳೆಸಿದ್ದು ಆಕೆ ತನ್ನಿಂದ ದೂರವಾಗುತ್ತಿದ್ದಾಳೆ. ತನ್ನ ಗೆಳೆಯನೊಂದಿಗೆ ಅಕ್ರಮ ಸಂಬಂಧ ಬೆಳೆಸಿದ್ದಾಳೆ ಎಂದು ಭಾವಿಸಿದ ಕರುಣಾಕರ್ ಮಹಿಳೆಯ ಐದು ವರ್ಷದ ಮಗುವನ್ನು ಕೊಲೆ ಮಾಡಿದ್ದಾನೆ. ಮಗಳ ಸಾವಿನ ವಿಚಾರಕ್ಕೆ ನೊಂದುಕೊಂಡಿದ್ದ ಸರ್ಕಾರಿ ನೌಕರ ಪತ್ನಿಯ ವರ್ತನೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ. ಘಟನೆ ನಡೆದ 10 ದಿನಗಳ ನಂತರ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಭುವನಗಿರಿ ಮೂಲದ ಸರ್ಕಾರಿ ನೌಕರ 2011ರಲ್ಲಿ ಆಂಧ್ರಪ್ರದೇಶದ ಅನಂತಪುರದ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದು, ಫೇಸ್ಬುಕ್ ಮೂಲಕ ಮಹಿಳೆಗೆ ಕರುಣಾಕರ್ ಸ್ನೇಹಿತನಾಗಿದ್ದ. ಆತ ತನ್ನ ಸ್ನೇಹಿತ ರಾಜಶೇಖರ್ ನನ್ನು ಮಹಿಳೆಗೆ ಪರಿಚಯ ಮಾಡಿಕೊಟ್ಟಿದ್ದಾನೆ. ಮಹಿಳೆ ರಾಜಶೇಖರ್ ನೊಂದಿಗೆ ಸಲುಗೆಯಿಂದ ಇದ್ದರು. ಇದನ್ನು ಸಹಿಸದ ಕರುಣಾಕರ್ ಮಹಿಳೆಯ ಮಗುವನ್ನು ಕೊಲೆ ಮಾಡಿದ್ದ. ಮಗುವಿನ ಸಾವಿನಿಂದ ನೊಂದ ಮಹಿಳೆಯ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.