
ಹದಿಹರೆಯದವರು ಇನ್ಸ್ಟಾಗ್ರಾಂ, ಫೇಸ್ಬುಕ್, ಸ್ನಾಪ್ಚಾಟ್ ಸೇರಿದಂತೆ ವಿವಿಧ ಸೋಶಿಯಲ್ ಮೀಡಿಯಾ ವೇದಿಕೆಗಳಲ್ಲಿ ಹೆಚ್ಚು ಕಾಲ ಸಕ್ರಿಯರಾಗಿ ಇರೋದ್ರಿಂದ ಸೈಬರ್ ವಂಚನೆಗೆ ಒಳಗಾಗುವ ಅಪಾಯ ಹೆಚ್ಚಾಗಿರುತ್ತೆ ಅಂತಾ ಅಧ್ಯಯನವೊಂದು ಹೇಳಿದೆ. ಜರ್ನಲ್ ಆಫ್ ಚೈಲ್ಡ್ & ಅಡೋಲೆಸೆಂಟ್ ಕೌನ್ಸೆಲಿಂಗ್ನಲ್ಲಿ ಪ್ರಕಟವಾದ ವರದಿಯಲ್ಲಿ ಆನ್ಲೈನ್ನಲ್ಲಿ ಹೆಚ್ಚಿನ ಸಮಯ ಕಳೆಯುವ ಹದಿಹರೆಯದವರು ಹೆಚ್ಚಿನ ಸೈಬರ್ ಕ್ರೈಂ ಅಪರಾಧಕ್ಕೆ ಬಲಿಯಾಗುತ್ತಾರೆ ಎಂದು ಹೇಳಿದೆ.
ಸೈಬರ್ ವಂಚನೆ ಅನ್ನೋದು ಅನೇಕ ಪ್ರಕಾರದಲ್ಲಿ ನಡೆಯಬಹುದು. ವೈಯಕ್ತಿಕ ದಾಳಿ, ಆನ್ಲೈನ್ನಲ್ಲಿ ನಿಮ್ಮ ಖಾಸಗಿ ಮಾಹಿತಿಯನ್ನ ಹಂಚುವುದು, ನಿಮ್ಮ ಮಹತ್ವದ ದಾಖಲೆಗಳನ್ನ ಶೇರ್ ಮಾಡುವುದು ಹೀಗೆ ವಿವಿಧ ರೀತಿಯಲ್ಲಿ ಹದಿಹರೆಯದವರ ಮೇಲೆ ಈ ಸೈಬರ್ ದಾಳಿ ನಡೆಯುತ್ತಿದೆ ಎಂದು ಈ ಅಧ್ಯಯನ ಹೇಳಿದೆ.
13 ರಿಂದ 19 ವರ್ಷದೊಳಗಿನ 428 ಮಂದಿ ಹದಿ ಹರೆಯದವರನ್ನ ಈ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಇದರಲ್ಲಿ 214 ಮಂದಿ ಯುವತಿಯರು ಹಾಗೂ 210 ಮಂದಿ ಯುವಕರು ಮತ್ತು 4 ಮಂದಿ ತೃತೀಯ ಲಿಂಗಿಗಳಿದ್ದರು.
ಈ ಅಧ್ಯಯನದಲ್ಲಿ ಭಾಗಿಯಾದವರು ದಿನದಲ್ಲಿ ಸರಾಸರಿ 7 ಗಂಟೆಗಳಿಗಿಂತ ಹೆಚ್ಚಿನ ಸಮಯವನ್ನ ಆನ್ಲೈನ್ನಲ್ಲಿ ಕಳೆದಿದ್ದಾರೆ ಎಂದು ವರದಿಯಾಗಿದೆ. ಸೈಬರ್ ಕ್ರೈಂಗೆ ಬಲಿಯಾಗುವುದರಲ್ಲಿ ಯುವತಿಯರಿಗಿಂತ ಯುವಕರಿಗೇ ಹೆಚ್ಚು ಅಪಾಯವಿದೆ ಅಂತಲೂ ಈ ಅಧ್ಯಯನ ಹೇಳಿದೆ.