
ಹೈದ್ರಾಬಾದ್: ಕೊರೊನಾ ಲಾಕ್ ಡೌನ್ ನಿಂದ ಕೆಲಸ ಕಳೆದುಕೊಂಡ ತಮ್ಮ ನೆಚ್ಚಿನ ಶಿಕ್ಷಕರೊಬ್ಬರ ಜೀವನಕ್ಕಾಗಿ ಹಳೆಯ ವಿದ್ಯಾರ್ಥಿಗಳು ಟಿಫಿನ್ ಸೆಂಟರ್ ಹಾಕಿಕೊಟ್ಟ ಅಪರೂಪದ ಘಟನೆ ತೆಲಂಗಾಣದಲ್ಲಿ ನಡೆದಿದೆ.
ಹನುಮಂತಲು ರಾಘು ಎಂಬ 52 ವರ್ಷದ ಶಿಕ್ಷಕರಿಗೆ ಟಿಫಿನ್ ಸೆಂಟರ್ ಹಾಕಿಕೊಟ್ಟಿದ್ದು, ʼಗುರು ದಕ್ಷಿಣಾʼ ಎಂದು ಹೆಸರಿಡಲಾಗಿದೆ.
ಜಗತಿಯಾಲ್ ಜಿಲ್ಲೆಯ ಕೊರುತುಲಾ ಎಂಬ ಊರಿನ ರುದ್ರಾಂಗಿ ಝಡ್ ಪಿ ಹೈಸ್ಕೂಲ್ ನಲ್ಲಿ ರಾಘು ಅವರು ಅತಿಥಿ ಶಿಕ್ಷಕರಾಗಿ ಇಂಗ್ಲಿಷ್ ಹಾಗೂ ಜೀವಶಾಸ್ತ್ರ ಕಲಿಸುತ್ತಿದ್ದರು. ಆದರೆ, ಶಾಲೆ ಬಾಗಿಲು ತೆರೆಯದ ಕಾರಣ ಅವರ ವೇತನವೂ ಇಲ್ಲದಾಯಿತು. ಅವರ ಪುತ್ರ ಕೂಡ ಬಿಎಡ್ ಮಾಡಿಕೊಂಡಿದ್ದು, ಕೆಲಸ ಕಳೆದುಕೊಂಡಿದ್ದ. ಇದರಿಂದ ಶಿಕ್ಷಕರ ಕುಟುಂಬ ಜೀವನ ನಿರ್ವಹಣೆಗೆ ತೊಂದರೆ ಅನುಭವಿಸುತ್ತಿತ್ತು.
ವಾಟ್ಸ್ ಆ್ಯಪ್ ಗ್ರೂಪ್ ನ ಮೂಲಕ ಸಂಪರ್ಕದಲ್ಲಿದ್ದ 1997-98 ರ ಬ್ಯಾಚ್ ನ ವಿದ್ಯಾರ್ಥಿಗಳು ತಮ್ಮ ಗುರುಗಳ ಈ ಪರಿಸ್ಥಿತಿ ಅರಿತು ಸಹಾಯಕ್ಕೆ ಧಾವಿಸಿದ್ದಾರೆ. “ನನ್ನ ವಿದ್ಯಾರ್ಥಿಗಳು ನನ್ನ ಸಹಾಯಕ್ಕೆ ಬಂದಿದ್ದಾರೆ. ಅವರ ಕಾರ್ಯ ಹೇಳಲು ನನಗೆ ಶಬ್ಧಗಳಿಲ್ಲ” ಎಂದು ರಾಘು ಮಾಧ್ಯಮಗಳಿಗೆ ಹೇಳಿಕೊಂಡಿದ್ದಾರೆ.