ಮಧ್ಯಪ್ರದೇಶದ ರೈತನೊಬ್ಬ ಕಳೆದ ತಿಂಗಳು ಕೇವಲ 200 ರೂಪಾಯಿಗೆ ಗುತ್ತಿಗೆ ಪಡೆದಿದ್ದ ಭೂಮಿಯಿಂದ ಲಕ್ಷ ಮೌಲ್ಯದ ಹಣವನ್ನ ಸಂಪಾದಿಸಿದ್ದಾನೆ.
45 ವರ್ಷದ ಲಖನ್ ಯಾದವ್ ಎಂಬ ರೈತ ಕಳೆದ ತಿಂಗಳು ಗುತ್ತಿಗೆ ಪಡೆದ ಭೂಮಿಯಿಂದ 14.98 ಕ್ಯಾರೆಟ್ ವಜ್ರವನ್ನ ಶೋಧಿಸಿದ್ದಾನೆ. ಈ ವಜ್ರದ ಬೆಲೆ 60.6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ವಜ್ರ ಪತ್ತೆಯಾದ ಬಗ್ಗೆ ಮಾತನಾಡಿದ ಲಖನ್, ಈ ವಜ್ರ ನನ್ನ ಜೀವನವನ್ನೇ ಬದಲಾಯಿಸಿದೆ. ನಾನು ಈ ಹಣವನ್ನ ಈಗ ಖರ್ಚು ಮಾಡೋದಿಲ್ಲ. ನನಗೆ ನಾಲ್ವರು ಮಕ್ಕಳಿದ್ದು ಆ ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಈ ಹಣವನ್ನ ಕೂಡಿಡುತ್ತೇನೆ ಎಂದು ಹೇಳಿದ್ದಾರೆ.
ಗುತ್ತಿಗೆ ಪಡೆದಿದ್ದ ಭೂಮಿಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಲಖನ್ಗೆ ಬೆಣಚುಕಲ್ಲು ಮಾದರಿಯ ವಸ್ತು ಪತ್ತೆಯಾಗಿದೆ. ಅದನ್ನ ಉಜ್ಜಿ ನೋಡಿದಾಗ ವಜ್ರದಂತೆ ಹೊಳೆದಿದೆ. ಬಳಿಕ ಇದನ್ನ ಜಿಲ್ಲಾ ವಜ್ರ ಕಚೇರಿಗೆ ತೆಗೆದುಕೊಂಡು ಹೋದ ವೇಳೆ ಇದು ನಿಜವಾದ ವಜ್ರ ಅನ್ನೋದು ಕನ್ಫರ್ಮ್ ಆಗಿದೆ.
ವಜ್ರ ಮಾರಿ ಸಿಕ್ಕ ಹಣದಿಂದ ಲಖನ್ ಎರಡು ಎಮ್ಮೆ ಹಾಗೂ ಒಂದು ಮೋಟಾರ್ ಸೈಕಲ್ ಖರೀದಿ ಮಾಡಿದ್ದಾರೆ.