ಅರುಣಾಚಲ ಪ್ರದೇಶದ ಗ್ರಾಮವೊಂದರಲ್ಲಿ ವಿವಾಹಿತನೊಂದಿಗೆ ಓಡಿಹೋಗಿದ್ದ ಮಹಿಳೆಯ ಬಟ್ಟೆ ಹರಿದು ಕೂದಲು ಕತ್ತರಿಸಿ ಚಿತ್ರಹಿಂಸೆ ನೀಡಲಾಗಿದೆ.
ಅರುಣಾಚಲ ಪ್ರದೇಶದ ಚಾಂಗ್ಲಾಂಗ್ ಜಿಲ್ಲೆಯ ಹಳ್ಳಿಯಲ್ಲಿ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ಘಟನೆಯ ವಿಡಿಯೋ ಈಗ ವೈರಲ್ ಆಗಿದ್ದು 38 ಜನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. 9 ಮಹಿಳೆಯರು ಸೇರಿದಂತೆ 15 ಜನರನ್ನು ಬಂಧಿಸಲಾಗಿದೆ.
5 ವರ್ಷಗಳ ಹಿಂದೆ ಮದುವೆಯಾಗಿದ್ದ ಮಹಿಳೆಗೆ ನೆಮ್ಮದಿಯೇ ಇಲ್ಲವಾಗಿತ್ತು. ಗಂಡ ಸೇರಿದಂತೆ ಆತನ ಮನೆಯವರು ಕಿರುಕುಳ ನೀಡುತ್ತಿದ್ದರು. ಗಂಡ ಹೊಟ್ಟೆಗೆ ಒದ್ದ ಕಾರಣ ಆಕೆಗೆ ಎರಡು ಸಲ ಗರ್ಭಪಾತವಾಗಿತ್ತು. ಗಂಡ ಮತ್ತು ಆತನ ಮನೆಯವರು ಕಿರುಕುಳದಿಂದ ನೊಂದ ಮಹಿಳೆ ವಿವಾಹಿತ ವ್ಯಕ್ತಿಯೊಂದಿಗೆ ಅಸ್ಸಾಂನ ತಿನ್ಸುಕಿಯಾಕ್ಕೆ ಓಡಿ ಹೋಗಿದ್ದಾಳೆ.
ಅವರ ಸಂಬಂಧವನ್ನು ಒಪ್ಪಿಕೊಳ್ಳುವುದಾಗಿ ಸಂಪರ್ಕಿಸಿದ ಕುಟುಂಬದವರು ಹಳ್ಳಿಗೆ ಕರೆದುಕೊಂಡು ಬಂದಿದ್ದು ಚಾಂಗ್ಲಾಂಗ್ ಜಿಲ್ಲೆಯ ತಮ್ಮ ಗ್ರಾಮಕ್ಕೆ ಬರುತ್ತಿದ್ದಂತೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ. ಗ್ರಾಮದ ಒಂದು ಕಡೆ ಗುಂಪು ಸೇರಿದ್ದ ಜನರು ಮಹಿಳೆಯ ಬಟ್ಟೆ ಹರಿದು ಶಾಲೆಯಲ್ಲಿ ಕೂಡಿ ಹಾಕಿದ್ದಾರೆ. ಊಟ ಕೊಡದೆ ಥಳಿಸಿದ್ದಾರೆ. ಆಕೆಯೊಂದಿಗೆ ಹೋಗಿದ್ದ ವ್ಯಕ್ತಿಯನ್ನು ಕೂಡ ಥಳಿಸಲಾಗಿದೆ.
ಗ್ರಾಮದ ಕೆಲವು ವೃದ್ಧೆಯರು ಮಹಿಳೆಗೆ ತಡರಾತ್ರಿ ತಣ್ಣೀರಿನಲ್ಲಿ ಸ್ನಾನಮಾಡಿಸಿ ಕೂದಲು ಕತ್ತರಿಸಿ ಬಟ್ಟೆ ಹರಿದು ಹಾಕಿದ್ದಾರೆ. ಕೆಲವರು ವಿಡಿಯೋ ಮಾಡಿಕೊಂಡಿದ್ದಾರೆ. ಘಟನೆಯ ವಿಡಿಯೋ ಬೆಳಕಿಗೆ ಬಂದ ನಂತರ ಕ್ರಮ ಕೈಗೊಳ್ಳಲಾಗಿದೆ ಎಂದು ಲೆಕಾಂಗ್ ಮಹಿಳಾ ಕಲ್ಯಾಣ ಸಂಘದ ಅಧಿಕಾರಿಗಳು ಹೇಳಿದ್ದಾರೆ.