alex Certify ‘ಆಶಾದೀಪ’ ಯೋಜನೆ ಜಾರಿ: ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಆಶಾದೀಪ’ ಯೋಜನೆ ಜಾರಿ: ಉದ್ಯೋಗದ ನಿರೀಕ್ಷೆಯಲ್ಲಿದ್ದವರಿಗೆ ಗುಡ್ ನ್ಯೂಸ್

ರಾಜ್ಯ ಸರ್ಕಾರವು ‘ಆಶಾದೀಪ’ ಎಂಬ ನೂತನ ಯೋಜನೆಯನ್ನು ಕರ್ನಾಟಕ ರಾಜ್ಯ ಕಾರ್ಮಿಕ ಕಲ್ಯಾಣ ಮತ್ತು ಸಾಮಾಜಿಕ ಭದ್ರತಾ ಸೊಸೈಟಿಯ ಮೂಲಕ ಜಾರಿಗೊಳಿಸಲಾಗುತ್ತಿದೆ.

ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಖಾಸಗಿ ವಲಯದ ಉದ್ಯೋಗಗಳಿಗೆ ಹೆಚ್ಚು ನೇಮಕಾತಿ ಮಾಡಿಕೊಳ್ಳಲು ಮಾಲೀಕರನ್ನು/ಉದ್ಯೋಗದಾರನ್ನು ಉತ್ತೇಜಿಸುವ ದೃಷ್ಟಿಯಿಂದ ಹಾಗೂ ಈ ಮೂಲಕ ಪ.ಜಾ/ಪ.ಪಂ.ದ ಅಭ್ಯರ್ಥಿಗಳು ಖಾಸಗಿ ವಲಯದಲ್ಲಿ ಉದ್ಯೋಗಾವಕಾಶ ಪಡೆಯಲು ಅನುಕೂಲವಾಗುವಂತೆ ‘ಆಶಾದೀಪ’ ಯೋಜನೆ ಜಾರಿಗೊಳಿಸಲಾಗುತ್ತಿದೆ.

ಈ ಯೋಜನೆಯ ಪ್ರಮುಖ ಉದ್ದೇಶಗಳು:

ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಠ ಪಂಗಡದವರಿಗೆ ಖಾಸಗಿ ವಲಯದ ಸಂಸ್ಥೆಗಳಲ್ಲಿ ಉದ್ಯೋಗ ದೊರಕಿಸಿಕೊಡುವುದು, ಸಾಮಾಜಿಕ ಹಾಗೂ ಆರ್ಥಿಕ ಜೀವನಮಟ್ಟವನ್ನು ಸುಧಾರಿಸುವುದು, ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳುವುದನ್ನು ಉತ್ತೇಜಿಸಲು, ನೇಮಕಾತಿ ಮಾಡಿಕೊಂಡ ಸಂಸ್ಥೆಗಳಿಗೆ ಅಂತಹ ನೌಕರರ ಇ.ಎಸ್.ಐ ಹಾಗೂ ಪಿ.ಎಪ್ ವಂತಿಕೆಯನ್ನು ಮರು ಪಾವತಿಸುವ ಮೂಲಕ ಆರ್ಥಿಕ ಸಹಾಯ ನೀಡುವುದು. ತರಬೇತಿ ಪಡೆಯುವ ಅಪ್ರೆಂಟಿಸ್‍ಗಳ ಶಿಷ್ಯ ವೇತನ(Stipend)ವನ್ನು ಉದ್ಯೋಗದಾತರಿಗೆ ಮರುಪಾವತಿಸುವುದರ ಮೂಲಕ ಸ್ವಾವಲಂಭಿಯಾಗಲು ಸಹಾಯ ಮಾಡುವುದು.

ಯೋಜನೆಯ ಸೌಲಭ್ಯಗಳು:

ಮಾಲೀಕರು ಪಾವತಿಸುವ ಇ.ಎಸ್.ಐ ಮತ್ತು ಇ.ಪಿ.ಎಫ್. ವಂತಿಕೆ ಮರುಪಾವತಿ:

ಖಾಸಗಿ ವಲಯದ ಸಂಸ್ಥೆಗಳಲ್ಲಿ ಹೊಸದಾಗಿ ನೇಮಿಸಿಕೊಂಡ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡದ ಉದ್ಯೋಗಿಗಳಿಗೆ ಮಾಲೀಕರು/ಉದ್ಯೋಗದಾತರು ಕಡ್ಡಾಯವಾಗಿ ಪಾವತಿಸಿದ ಶಾಸನಬದ್ಧ ಭವಿಷ್ಯನಿಧಿ ಹಾಗೂ ಇ.ಎಸ್.ಐ ವಂತಿಕೆಯನ್ನು ರಾಜ್ಯ ಸರ್ಕಾರದಿಂದ ಮಾಲೀಕರು/ ಉದ್ಯೋಗದಾತರಿಗೆ ಎರಡು ವರ್ಷಗಳ ಅವಧಿಯ ವರೆಗೆ ಮಾಸಿಕ ಗರಿಷ್ಠ 3000 ರೂ. ಮಿತಿಯೊಳಗೆ ಮರುಪಾವತಿ ಮಾಡಲಾಗುವುದು. (ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಂಡಲ್ಲಿ ಒಂದು ವರ್ಷದ ಅವಧಿಗೆ ಮರುಪಾವತಿ)

ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಅಭ್ಯರ್ಥಿಗಳ ಶಿಷ್ಯವೇತನ ಮರುಪಾವತಿ:

ಒಂದು ವರ್ಷದ ಅವಧಿಯ ಸಾಮಾನ್ಯ(Normal) ಹಾಗೂ ಎರಡು ವರ್ಷಗಳ ಅವಧಿಯ ಸಮಗ್ರ (Comprehensive) ಅಪ್ರೆಂಟಿಸ್ ತರಬೇತಿ ಪಡೆಯುತ್ತಿರುವ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಅಪ್ರೆಂಟಿಸ್‍ಶಿಪ್ ಕಾಯ್ದೆ 1961 ರನ್ವಯ ಮಾಲೀಕರು ಪಾವತಿಸಿದ ಮಾಸಿಕ ಶಿಷ್ಯವೇತನ ಮೊತ್ತದಲ್ಲಿ 2/3 ರಷ್ಟು ಮೊತ್ತವನ್ನು ಮಾಸಿಕ  5000 ರೂ. ಗಳ ಮಿತಿಯೊಳಗೆ ಮಾಲೀಕರಿಗೆ ಮರುಪಾವತಿ ಮಾಡಲಾಗುವುದು.

ಅಪ್ರೆಂಟಿಸ್ ತರಬೇತಿ ನಂತರ ನೇಮಕ ಮಾಡಿಕೊಂಡಲ್ಲಿ ವೇತನ ಮರುಪಾವತಿ:

ಅಪ್ರೆಂಟಿಸ್ ತರಬೇತಿ ಪಡೆದ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳನ್ನು ಅದೇ ಮಾಲೀಕರು ನೇಮಕಾತಿ ಮಾಡಿಕೊಂಡಲ್ಲಿ, ಅಂತಹ ನೌಕಕರಿಗೆ ಆಯಾ ಮಿತಿಯೊಳಗೆ ಉದ್ಯೋಗದಾತರಿಗೆ ಒಂದು ವರ್ಷದ ಅವಧಿಗೆ ಮರುಪಾವತಿ ಮಾಡಲಾಗುವುದು.

ಕೌಶಲ್ಯಾಭಿವೃದ್ಧಿ ಇಲಾಖೆಯ ಮುಖಾಂತರ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಠ ಪಂಗಡದ ಅಭ್ಯರ್ಥಿಗಳಿಗೆ ಕೌಶಲ್ಯ ತರಬೇತಿಗಳನ್ನು ಏರ್ಪಡಿಸಿ ಸ್ವಾವಲಂಭಿಗಳಾಗಲು ಉತ್ತೇಜನ ನೀಡುವುದು ಈ ಯೋಜನೆಯ ಉದ್ದೇಶವಾಗಿದ್ದು, ಈ ಯೋಜನೆಯ ಸದುಪಯೋಗ ಪಡೆದುಕೊಳ್ಳುವಂತೆ ಕಾರ್ಮಿಕ ಅಧಿಕಾರಿ ತಿಳಿಸಿದ್ದಾರೆ

ಹೆಚ್ಚಿನ ಮಾಹಿತಿಗಾಗಿ  ಕಾರ್ಮಿಕ ಅಧಿಕಾರಿಯವರ ಕಛೇರಿ, ಶಿವಮೊಗ್ಗ ಉಪವಿಭಾಗ ಶಿವಮೊಗ್ಗ, 2ನೇ ಮಹಡಿ ವಾಣಿಜ್ಯ  ಸಂಕೀರ್ಣ, ಸೂಡ ಕಾಂಪ್ಲೆಕ್ಸ್  ಪೊಲೀಸ್ ಚೌಕಿ, ವಿನೋಬನಗರ, ಶಿವಮೊಗ್ಗ. ದೂರವಾಣಿ ಸಂ:-08182-248940, (labourofficershimoga@yahoo.in) ಸಂಪರ್ಕಿಸುವುದು.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...