ಕೊರೊನಾದಿಂದಾಗಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಂದೂಡಿಕೆಯಾಗಿತ್ತು. ಕೊರೊನಾ ಪರಿಸ್ಥಿತಿ ಇಲ್ಲದೇ ಇದ್ದರೆ ಪ್ರತಿ ವರ್ಷದಂತೆ ಈ ವರ್ಷ ಕೂಡ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮುಗಿದು ರಿಸಲ್ಟ್ ಕೂಡ ಅನೌನ್ಸ್ ಆಗಬೇಕಿತ್ತು. ಆದರೆ ಈ ಬಾರಿ ಪರಿಸ್ಥಿತಿ ಹಾಗಿರಲಿಲ್ಲ. ಕೊರೊನಾದಿಂದಾಗಿ ಎಲ್ಲವೂ ಅಯೋಮಯವಾಗಿಯೇ ಇದೆ. ಹೀಗಾಗಿ ಇತ್ತೀಚೆಗೆ ತೆಲಂಗಾಣ ಸರ್ಕಾರ ಮಹತ್ವದ ನಿರ್ಧಾರವೊಂದನ್ನು ತೆಗೆದುಕೊಂಡಿತ್ತು.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನೇ ರದದುಗೊಳಿಸಿದೆ. ಎಲ್ಲಾ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ತೇರ್ಗಡೆಯಾಗಿದ್ದಾರೆ ಎಂದು ಆದೇಶ ಹೊರಡಿಸಿದೆ. ಇದರ ಬೆನ್ನಲ್ಲೇ ಇದೀಗ ತಮಿಳುನಾಡು ಸರ್ಕಾರ ಕೂಡ ಮಕ್ಕಳ ಆರೋಗ್ಯ ದೃಷ್ಟಿಯಿಂದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ರದ್ದುಗೊಳಿಸಿದೆ. ಎಲ್ಲಾ ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಲು ತೇರ್ಗಡೆಯಾಗಿದ್ದಾರೆ ಎಂದು ಹೇಳಿದೆ.
ನಮ್ಮ ರಾಜ್ಯದಲ್ಲೂ ಇದೇ ರೀತಿ ಆಗುತ್ತಾ ಎಂಬ ಪ್ರಶ್ನೆ ಉದ್ಭವವಾಗಿತ್ತು. ಆದರೆ ಇದೀಗ ಈ ವಿಚಾರವಾಗಿ ಉಡುಪಿಯಲ್ಲಿ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಮ್ಮ ರಾಜ್ಯದಲ್ಲಿ ನಡೆದೇ ನಡೆಯುತ್ತದೆ. ರದ್ದು ಮಾಡುವ ಯಾವುದೇ ಅವಕಾಶ ಇಲ್ಲ. ಎಲ್ಲಾ ಮುಂಜಾಗೃತ ಕ್ರಮಗಳನ್ನು ತೆಗೆದುಕೊಂಡು ಪರೀಕ್ಷೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.