
ಕೊರೊನಾ ಎರಡನೇ ಅಲೆ ಭಾರತದಲ್ಲಿ ಆರ್ಭಟಿಸುತ್ತಿದೆ. ಇನ್ನೊಂದೆಡೆ ಕೊರೊನಾ ಲಸಿಕೆ ಅಭಿಯಾನ ಚುರುಕು ಪಡೆದಿದೆ. ಈ ಮಧ್ಯೆ ಆರ್‌ಡಿಐಎಫ್, ಈ ಬೇಸಿಗೆಯಲ್ಲಿ ಭಾರತದಲ್ಲಿ ಐದು ಕೋಟಿ ಪ್ರಮಾಣದ ಸ್ಪುಟ್ನಿಕ್ ವಿ ಲಸಿಕೆಯನ್ನು ಉತ್ಪಾದಿಸುವ ನಿರೀಕ್ಷೆಯಿದೆ ಎಂದಿದೆ. ರಷ್ಯಾದಲ್ಲಿ ಕ್ಲಿನಿಕಲ್ ಪ್ರಯೋಗಗಳು ಮತ್ತು ಭಾರತದಲ್ಲಿ ಮೂರನೇ ಹಂತದ ಸ್ಥಳೀಯ ಕ್ಲಿನಿಕಲ್ ಪ್ರಯೋಗಗಳು ಸಕಾರಾತ್ಮಕವಾಗಿವೆ. ಈ ವರದಿ ಆಧರಿಸಿ ಲಸಿಕೆ ತುರ್ತು ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ ಸೋಮವಾರ ಅನುಮೋದನೆ ನೀಡಿದೆ. ಭಾರತದಲ್ಲಿ ಡಾ. ರೆಡ್ಡಿ ಪ್ರಯೋಗಾಲಯ ಇದನ್ನು ಪರೀಕ್ಷಿಸಲಾಗ್ತಿದೆ.
ಸ್ಪುಟ್ನಿಕ್ ವಿ, ಇಂಡೋ-ರಷ್ಯನ್ ಲಸಿಕೆ. ಯಾಕೆಂದ್ರೆ ಭಾರತದಲ್ಲಿ ಬೃಹತ್ ಪ್ರಮಾಣದಲ್ಲಿ ಇದ್ರ ಉತ್ಪಾದನೆಯಾಗ್ತಿದೆ ಎಂದು ಆರ್ ಡಿ ಐ ಎಫ್ ಸಿಇಒ ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ಇದ್ರ ಪ್ರಭಾವ ಕಡಿಮೆ ಇರಬಹುದು. ಆದ್ರೆ ಕೊರೊನಾ ವಿರುದ್ಧ ಜನರನ್ನು ಈ ಲಸಿಕೆ ರಕ್ಷಿಸುತ್ತದೆ ಎಂದವರು ಹೇಳಿದ್ದಾರೆ.
ರೂಪಾಂತರಿ ಕೊರೊನಾ ವೈರಸ್ ಗಳ ಮೇಲೆ ಹೆಚ್ಚು ಪರಿಣಾಮ ಬೀರಿರುವ ವಿಶ್ವದ ಏಕೈಕ ಲಸಿಕೆ ಸ್ಪುಟ್ನಿಕ್ ವಿ ಎಂದು ಅವರು ಹೇಳಿದ್ದಾರೆ. ಇದು ರೂಪಾಂತರ ವೈರಸ್ ವಿರುದ್ಧ ಹೋರಾಡಲು ಶಕ್ತಿ ನೀಡುವ ಜೊತೆಗೆ ರೋಗ ನಿರೋಧ ಶಕ್ತಿಯನ್ನು ಹೆಚ್ಚಿಸುತ್ತದೆ. ಅಲ್ಲದೆ ಈ ಲಸಿಕೆಯಿಂದ ಉತ್ಪತ್ತಿಯಾಗುವ ರೋಗ ನಿರೋಧಕ ಶಕ್ತಿ ತುಂಬಾ ಸಮಯ ಇರುತ್ತದೆ ಎಂದವರು ಹೇಳಿದ್ದಾರೆ. ಅಲ್ಲದೆ ಲಸಿಕೆ ಸುಧಾರಣೆಗೆ ಪ್ರಯತ್ನ ಶುರುವಾಗಲಿದೆ ಎಂದು ಭರವಸೆ ನೀಡಿದ್ದಾರೆ.