ಖಾಸಗಿ ವಾಹಿನಿಯಲ್ಲಿ ಬರುವ ಬಿಗ್ ಬಾಸ್ ಎಂಬ ರಿಯಾಲಿಟಿ ಶೋ ಯಾರಿಗೆ ತಾನೆ ಗೊತ್ತಿಲ್ಲ ? ಒಂದು ಮನೆಯೊಳಗೆ ವಿಭಿನ್ನ ಮನಸ್ಕರು, ವಿಚಿತ್ರ ಟಾಸ್ಕ್ ಗಳು, ಅಚ್ಚರಿಯ ಆಕರ್ಷಣೆಗಳು, ಮೋಜು-ಮಸ್ತಿ-ಕುಸ್ತಿ ಎಲ್ಲಕ್ಕೂ ಅವಕಾಶ ಉಂಟು.
ದೇಶದಲ್ಲಿ ಮಹಾರಾಷ್ಟ್ರ ಬಿಟ್ಟರೆ ಆಂಧ್ರಪ್ರದೇಶದಲ್ಲಿ ಅತಿ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಅದರಲ್ಲೂ ರೋಗಲಕ್ಷಣ ಇಲ್ಲದ ಸೋಂಕಿತರ ಸಂಖ್ಯೆಯೇ ಹೆಚ್ಚು.
ಇವರಿಗೆಲ್ಲ ಆಸ್ಪತ್ರೆ ಬದಲು ಕ್ವಾರಂಟೈನ್ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಒಂದೆಡೆ ದೈಹಿಕ ಅನಾರೋಗ್ಯದಿಂದ ಬಳಲುವ ಮಂದಿ, ಕ್ವಾರಂಟೈನ್ ಕೇಂದ್ರಗಳಲ್ಲಿ ದಿನಗಟ್ಟಲೇ ಸುಮ್ಮನಿರುವುದು ಎಂದರೆ ಮಾನಸಿಕವಾಗಿ ಖಿನ್ನತೆಗೆ ಒಳಗಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ ಅನಂತಪುರ ಜಿಲ್ಲಾಡಳಿತವು ಇಲ್ಲಿನ ಕ್ವಾರಂಟೈನ್ ಕೇಂದ್ರಗಳಲ್ಲಿ ಇರುವವರನ್ನು ರಂಜಿಸಲು ಅನೇಕ ಆಟ, ಸಂಗೀತದ ಮೂಲಕ ಮನಸಿಗೂ ಥೆರಪಿ ಮಾಡುತ್ತಿದೆ.
ಕ್ವಾರಂಟೈನ್ ಕೇಂದ್ರದಲ್ಲಿ ಮುಂಜಾನೆ ಸ್ಪೀಕರ್ ಮೂಲಕ ಸುಪ್ರಭಾತ ಕೇಳಿಬರುತ್ತದೆ. ಅಲ್ಲಿಂದ ಶುರುವಾಗುವ ದಿನಚರಿ, ಜಿಲ್ಲಾಡಳಿತ ನಿಗದಿಪಡಿಸಿದ ಸಮಯದಂತೆ ನಡೆಯುತ್ತದೆ. ತಿಂಡಿ, ಊಟ, ಔಷಧಿ, ಮಾತ್ರೆ ಜೊತೆಗೆ ಆಟಕ್ಕೂ ಅವಕಾಶ ಮಾಡಿಕೊಟ್ಟಿದೆ. ಸಾಮಾಜಿಕ ಸಮಾಲೋಚಕ (ಸೋಶಿಯಲ್ ಕೌನ್ಸೆಲಿಂಗ್) ರು, ವೈದ್ಯರ ಮೂಲಕ ದೈಹಿಕ ಹಾಗೂ ಮಾನಸಿಕ ಸ್ವಾಸ್ಥ್ಯ ಕಾಪಾಡಲಾಗುತ್ತಿದೆ.