
ಕಳೆದ ಆಗಸ್ಟ್ 5 ರಂದು ಎಸ್‌ಪಿಬಿ ಅವರಿಗೆ ಕೊರೊನಾ ಸೋಂಕು ಕಾಣಿಸಿತ್ತು. ಹೀಗಾಗಿ ಅವರನ್ನು ಚೆನ್ನೈನ ಎಂಜಿಎಂ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದರ ಮಧ್ಯೆ ಅವರ ಆರೋಗ್ಯ ಗಂಭೀರವಾದ ಕಾರಣ ಅವರನ್ನು ಐಸಿಯುನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಕಳೆದ ಕೆಲವು ದಿನಗಳಿಂದಲೂ ಅವರಿಗೆ ಐಸಿಯುನಲ್ಲೇ ಚಿಕಿತ್ಸೆ ಮುಂದುವರೆಸಲಾಗಿದೆ. ಈ ಮಧ್ಯೆ ನಿನ್ನೆ ಎಸ್‌ಪಿಬಿ ಬಗ್ಗೆ ವದಂತಿಯೊಂದು ಹರಿದಾಡಿತ್ತು.
ನಿನ್ನೆಯಷ್ಟೆ ಆಸ್ಪತ್ರೆಯ ಪಿಆರ್‌ಓ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಕೊರೊನಾ ವರದಿ ನೆಗೆಟಿವ್ ಬಂದಿದ್ದು, ಅವರ ಆರೋಗ್ಯದಲ್ಲಿ ಮತ್ತಷ್ಟು ಚೇತರಿಕೆ ಆಗಿದೆ ಎಂದು ಹೇಳಿದ್ದರು ಎನ್ನಲಾಗಿತ್ತು. ಆದರೆ ಇದೊಂದು ವದಂತಿ. ಅವರ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ ಎಂದು ಎಸ್‌ಪಿಬಿ ಅವರ ಪುತ್ರ ಚರಣ್ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ವಿಡಿಯೋ ಮಾಡಿರುವ ಎಸ್‌ಪಿಬಿ ಪುತ್ರ ಎಸ್.ಪಿ. ಚರಣ್, ತಂದೆಯ ಆರೋಗ್ಯದ ಮಾಹಿತಿ ಮೊದಲು ನನಗೆ ತಿಳಿಯುತ್ತದೆ. ವೈದ್ಯರ ಜೊತೆ ಕನ್ಫರ್ಮ್ ಮಾಡಿಕೊಂಡು ಮಾಹಿತಿ ನೀಡುತ್ತಿದ್ದೇನೆ. ತಂದೆಯವರಿಗೆ ಕೊರೊನಾ ನೆಗೆಟಿವ್ ವರದಿ ಬಂದಿದೆ ಎಂದು ಹಬ್ಬಿಸಿದ್ದಾರೆ. ಸದ್ಯ ಆ ಬಗ್ಗೆ ಯಾವುದೇ ಮಾಹಿತಿ ಇಲ್ಲ. ತಂದೆಯ ಆರೋಗ್ಯದಲ್ಲಿ ಯಾವುದೇ ಬದಲಾವಣೆ ಆಗಿಲ್ಲ, ಸ್ಥಿರವಾಗಿದೆ. ಅವರ ಆರೋಗ್ಯ ಸ್ಥಿರವಾಗಿರುವುದು ಚೇತರಿಸಿಕೊಳ್ಳಲು ಸಹಕಾರಿ ಆಗಿದೆ. ಅವರಿಗೆ ವೆಂಟಿಲೇಟರ್‌ನಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದಿದ್ದಾರೆ.