ರಾಷ್ಟ್ರ ರಾಜಧಾನಿ ದೆಹಲಿಯ ದ್ವಾರಕಾ ಇಲಾಖೆಯು ಅಮಾನವೀಯ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ರಣವೀರ್ ಎಂಬ ಹೆಸರಿನ ಓರ್ವ ವ್ಯಕ್ತಿ ತನ್ನ ತಾಯಿ ಅವತಾರ್ ಕೌರ್ ಜೊತೆ ವಾಗ್ವಾದ ನಡೆಸಿದ ಬಳಿಕ ಆಕೆಯ ಕೆನ್ನೆಗೆ ಬಾರಿಸಿದ್ದು, ಪರಿಣಾಮ ವೃದ್ಧ ಮಹಿಳೆ ನೆಲದಲ್ಲಿ ಕುಸಿದುಬಿದ್ದಾರೆ. ಪ್ರಜ್ಞೆ ತಪ್ಪಿದ್ದ ಮಹಿಳೆಯನ್ನ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಆಕೆ ಮೃತಪಟ್ಟಿದ್ದಾಳೆ.
ಈ ಘಟನೆ ನಡೆಯುವ ಹಿಂದಿನ ದಿನ ಪೊಲೀಸರಿಗೆ ಬಿಲ್ಡರ್ ಫ್ಲಾಟ್ನ ಹೊರಗೆ ಪಾರ್ಕಿಂಗ್ ವಿಚಾರಕ್ಕೆ ಜಗಳವಾಗ್ತಿದೆ ಎಂದು ಒಂದು ಕರೆ ಬಂದಿತ್ತು. ಆದರೆ ತದನಂತರ ಪರಿಸ್ಥಿತಿ ಶಾಂತವಾಗಿತ್ತು. ಇದಾದ ನಂತರ ವ್ಯಕ್ತಿ ಆತನ ತಾಯಿ ಹಾಗೂ ಹೆಂಡತಿ ನಡು ರಸ್ತೆಯಲ್ಲಿ ವಾಗ್ವಾದಕ್ಕೆ ಇಳಿದಿದ್ದರು. ಪತ್ನಿ ಸಮ್ಮುಖದಲ್ಲೇ ಪತಿ, ತನ್ನ ವೃದ್ಧ ತಾಯಿಗೆ ಕಪಾಳಮೋಕ್ಷ ಮಾಡಿದ್ದಾನೆ. ಕೂಡಲೇ ನೆಲಕ್ಕೆ ಕುಸಿದ ವೃದ್ಧೆಯನ್ನ ಆರೋಪಿಯ ಪತ್ನಿ ಮೇಲಕ್ಕೆತ್ತಲು ಯತ್ನಿಸಿದ್ದಾರೆ. ಘಟನೆಯ ಬಳಿಕ ಆರೋಪಿ ಸ್ಥಳದಿಂದ ಪರಾರಿಯಾಗಿದ್ದ. ಆದರೆ ಆತನನ್ನ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸದ್ಯ ವೃದ್ಧೆಯ ಶವವನ್ನ ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆಯ ಬಳಿಕ ಈ ಸಾವು ನೆಲಕ್ಕೆ ಕುಸಿದಿದ್ದರಿಂದ ಆಗಿದೆಯೋ ಇಲ್ಲವೇ ವೃದ್ಧೆಗೆ ಬೇರೆ ಏನಾದರೂ ಸಮಸ್ಯೆ ಇದ್ದಿದ್ದರಿಂದ ಹೀಗಾಯ್ತಾ ಎಂದು ತಿಳಿಯಲಿದೆ. ಈ ಸಂಬಂಧ ಬಿಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.