ಹೆಸರು ಸುಖ್ವಿಂದರ್ ಕೌರ್, ಒಂದು ಕಾಲದಲ್ಲಿ ನಮ್ಮ ನಿಮ್ಮೆಲ್ಲರಂತೆ ಸಾಮಾನ್ಯ ಮಹಿಳೆ ಆಕೆ. ಆದ್ರೆ ಈಗ ಕೋಟ್ಯಾಧೀಶೆ. ಹೆಸರು ಕೂಡ ರಾಧೆ ಮಾ ಅಂತಾ ಬದಲಾಗಿದೆ. ತಾನೇ ದೇವತೆಯ ಅಪರಾವತಾರ ಎನ್ನುತ್ತಿರೋ ರಾಧೇ ಮಾ, ಖೈರಾ ಪರಿಷದ್ ಪಟ್ಟಿ ಮಾಡಿರೋ 14 ಢೋಂಗಿ ಬಾಬಾಗಳಲ್ಲಿ ಒಬ್ಬರಾಗಿದ್ದರು. ಇದೀಗ ಬಾಲಿವುಡ್ ನಟ ಸಲ್ಮಾನ್ ಖಾನ್ ನಡೆಸಿಕೊಡುತ್ತಿರುವ ಬಿಗ್ ಬಾಸ್ ಗೆ ರಾಧೆ ಮಾ ಎಂಟ್ರಿಯಾಗಿದ್ದಾರೆ.
ರಾಧೆ ಮಾ ಐಷಾರಾಮಿ ಬಂಗಲೆಯಲ್ಲಿ ವಾಸವಾಗಿದ್ದಾರೆ. ಮುಂಬೈನ ಚಿಕ್ವಾಡಿಯಲ್ಲಿರೋ ಆ ಬಂಗಲೆಯ ಹೆಸರು ನಂದ ನಂದನ ಭವನ. ರಾಧೇ ಮಾಳ ಇಷ್ಟದ ಕೆಂಪು ಬಣ್ಣದಲ್ಲಿದೆ. ಈ ಬಂಗಲೆ ಕಡಿಮೆ ಅಂದ್ರೂ 250 ಕೋಟಿ ರೂಪಾಯಿ ಬೆಲೆಬಾಳುತ್ತದೆ.
ರಾಧೆ ಮಾ ಭಕ್ತರನ್ನು ಭೇಟಿಯಾಗಲು ವಿಶೇಷ ಕೋಣೆಯಿದೆ. ಅಲ್ಲಿ ಎಲ್ಲವೂ ಕೆಂಪು ಕೆಂಪು. ತಾನು ಭಕ್ತರ ಮನೆಯಲ್ಲೇ ನೆಲೆಸುವುದಾಗಿ ರಾಧೆ ಮಾ ಹೇಳಿಕೊಳ್ತಾರೆ. ಆದ್ರೆ ಅವರ ಆಸ್ತಿಯ ಮೌಲ್ಯ 1000 ಕೋಟಿಗೂ ಅಧಿಕ. ಈ ಐಷಾರಾಮಿ ಬಂಗಲೆ ಅವರ ಪುತ್ರ ಹರ್ಜಿಂದರ್ ಮೋಹನ್ ಸಿಂಗ್ ಹೆಸರಲ್ಲಿದೆ.
ರಾಧೆ ಮಾ ಬಳಿ ಲಕ್ಷುರಿ ಕಾರುಗಳಿಗೇನೂ ಬರವಿಲ್ಲ. ಮರ್ಸಿಡಿಸ್, ಹೋಂಡಾ ಸಿಟಿ, ಫಾರ್ಚುನರ್ ಹಾಗೂ ಜಾಗ್ವಾರ್ ಕಾರುಗಳಿವೆ. ರಾಧೆ ಮಾ ಭಕ್ತರನ್ನು ಭೇಟಿಯಾಗುವ ಅವಧಿ ಮುಗಿದ ಬಳಿಕ ಸತ್ಸಂಗ ನಡೆಯುವ ಜಾಗದಲ್ಲಿ ಈ ಐಷಾರಾಮಿ ಕಾರುಗಳನ್ನು ಪಾರ್ಕ್ ಮಾಡಲಾಗುತ್ತದೆ.
ರಾಧೆ ಮಾ ಅವರ ಬಂಗಲೆ ಅನಧಿಕೃತ ಅನ್ನೋ ಆರೋಪವೂ ಇದೆ. ಪುರಸಭೆಯ ನಿಯಮಗಳನ್ನು ಉಲ್ಲಂಘಿಸಿ ಅದನ್ನು ಕಟ್ಟಲಾಗಿದೆ ಅಂತಾ ರಮೇಶ್ ಜೋಶಿ ಎಂಬುವವರು ದೂರು ನೀಡಿದ್ದರು. ಕೇವಲ 1.65 ಕೋಟಿ ರೂ. ಕೊಟ್ಟು ಈ ಬಂಗಲೆ ಖರೀದಿ ಮಾಡಲಾಗಿದೆ. 30 ಕೋಟಿ ರೂಪಾಯಿ ಕಪ್ಪು ಹಣ ನೀಡಲಾಗಿದೆ ಅಂತಾ ಆರೋಪಿಸಿದ್ದರು. ಇಷ್ಟೆಲ್ಲಾ ಹಿನ್ನಲೆ ಹೊಂದಿರುವ ರಾಧೆ ಮಾ ಈಗ ಬಿಗ್ ಬಾಸ್ ನಲ್ಲಿದ್ದು, ಅಲ್ಲಿ ಮತ್ತಿನ್ಯಾವ ವಿವಾದ ಸೃಷ್ಟಿಸಲಿದ್ದರೋ ಎಂಬುದನ್ನು ಕಾದು ನೋಡಬೇಕಿದೆ.