ಚಾಲಕನನ್ನು ಥಳಿಸಿ, ಲಾರಿಯಲ್ಲಿದ್ದ 2 ಕೋಟಿ ರೂ. ಮೌಲ್ಯದ ಸ್ಮಾರ್ಟ್ ಫೋನ್ ಗಳನ್ನು ಕದ್ದೊಯ್ದಿರುವ ಘಟನೆ ಆಂಧ್ರಪ್ರದೇಶದ ನಾಗಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಮಿಳುನಾಡಿನ ಶ್ರೀಪೆರಂಬುದೂರು ಎಂಬಲ್ಲಿರುವ ಕ್ಸಿಯೋಮಿ ಕಂಪನಿಯ ಘಟಕದಿಂದ ಮುಂಬೈಗೆ 16 ಬಂಡಲುಗಳಲ್ಲಿ ಕೋಟ್ಯಂತರ ರೂಪಾಯಿ ಮೌಲ್ಯದ ಸ್ಮಾರ್ಟ್ ಫೋನ್ ಗಳನ್ನು ಕಂಟೈನೇರ್ ನಲ್ಲಿ ತೆಗೆದುಕೊಂಡು ಹೋಗಲಾಗುತ್ತಿತ್ತು.
ಮಂಗಳವಾರ ಮಧ್ಯರಾತ್ರಿ ತಮಿಳುನಾಡು – ಆಂಧ್ರಪ್ರದೇಶದ ಗಡಿ ಜಿಲ್ಲೆಯಾದ ಚಿತ್ತೂರು ಬಳಿ ಕಂಟೇನರ್ ಗೆ ಅಡ್ಡಲಾಗಿ ಮತ್ತೊಂದು ಲಾರಿ ಬಂದು ನಿಂತಿತು. ಪ್ರಶ್ನಿಸುವಷ್ಟರಲ್ಲಿ ನನ್ನನ್ನು ಥಳಿಸಿ, ಕೈಕಾಲು ಕಟ್ಟಿ ಅಜ್ಞಾತ ಸ್ಥಳದಲ್ಲಿ ಬಿಟ್ಟರು. ಹಿಂದಿರುಗಿ ಬರುವಷ್ಟರಲ್ಲಿ ಕಂಟೇನರ್ ಅಲ್ಲಿರಲಿಲ್ಲ. ಬೆಳಗಾಗಿದ್ದರಿಂದ ಸಾರ್ವಜನಿಕರ ಸಹಾಯದಿಂದ ನಾಗಾರಿ ಪೊಲೀಸ್ ಠಾಣೆಗೆ ತೆರಳಿ ಮಾಹಿತಿ ನೀಡಿದ್ದಾಗಿ ಚಾಲಕ ಇರ್ಫಾನ್ ಹೇಳಿಕೆ ನೀಡಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು, ಕಂಪನಿಗೆ ಮಾಹಿತಿ ನೀಡಿ ಪ್ರತಿನಿಧಿಗಳನ್ನು ಸ್ಥಳಕ್ಕೆ ಕರೆಯಿಸಿಕೊಂಡರು. ಸಾಕಷ್ಟು ಹುಡುಕಾಟದ ನಂತರ ಸ್ವಲ್ಪ ದೂರದಲ್ಲೇ ಕಂಟೇನರ್ ಪತ್ತೆಯಾಯಿತು. ಅದರಲ್ಲಿದ್ದ 16 ಬಂಡಲ್ ಪೈಕಿ 8 ಬಂಡಲ್ ನಲ್ಲಿದ್ದ ಸ್ಮಾರ್ಟ್ ಫೋನ್ ಗಳು ಕಾಣೆಯಾಗಿದ್ದು, ಇದರ ಮೌಲ್ಯ 2 ಕೋಟಿ ರೂ. ಎಂದು ಕಂಪನಿ ಅಂದಾಜಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ನಾಗಾರಿ ಪೊಲೀಸರು, ಕಂಟೇನರ್ ಚಾಲಕ ಇರ್ಫಾನ್ ನ್ನು ವಶಕ್ಕೆ ಪಡೆದಿದ್ದು, ತನಿಖೆ ಮುಂದುವರಿಸಿದ್ದಾರೆ.