
ಲಾಕ್ ಡೌನ್ ಸೈಡ್ ಎಫೆಕ್ಟ್ ಒಂದೊಂದಾಗಿ ಬಹಿರಂಗವಾಗುತ್ತಿದೆ. ಇದೀಗ ಸರ್ವೇಯೊಂದರ ಪ್ರಕಾರ ಶೇಕಡಾ 65ರಷ್ಟು ಮಕ್ಕಳು ಗ್ಯಾಜೆಟ್ ವ್ಯಸನಿಗಳಾಗಿದ್ದಾರೆ. ಸುಮಾರು ಅರ್ಧ ಗಂಟೆ ಕೂಡಾ ಇವರುಗಳಿಗೆ ದೂರವಿರಲು ಸಾಧ್ಯವಿಲ್ಲ, ಗ್ಯಾಜೆಟ್ ನಿಂದ ದೂರ ಇರುವಂತೆ ಪೋಷಕರು ಹೇಳಿದರೆ, ಮಕ್ಕಳು ಕೋಪ ಹೊರಹಾಕುವುದು, ಅಳುವುದು, ಮಾತು ಕೇಳದಿರುವ ವರ್ತನೆ ತೋರಿಸುತ್ತಿದ್ದಾರಂತೆ.
ಮಕ್ಕಳ ಆರೋಗ್ಯದ ಮೇಲೆ ಕೋವಿಡ್ 19 ಲಾಕ್ಡೌನ್ ಪರಿಣಾಮದ ಕುರಿತು ಜೈಪುರದ ಜೆಕೆ ಲೋನ್ ಆಸ್ಪತ್ರೆಯ ವೈದ್ಯರು 203 ಮಕ್ಕಳ ಮೇಲೆ ಅಧ್ಯಯನ ಮಾಡಿದ್ದಾರೆ. ಈ ಅಧ್ಯಯನದ ವರದಿ ಸಾರಾಂಶ ಇದಾಗಿದೆ.
ಈ ಸರ್ವೇ ಪ್ರಕಾರ ಶೇಕಡ 65.2 ರಷ್ಟು ವಿದ್ಯಾರ್ಥಿಗಳಲ್ಲಿ ದೈಹಿಕ ಸಮಸ್ಯೆ ಕಾಣಿಸಿಕೊಂಡಿದೆ. ಶೇಕಡ 23.40 ಮಕ್ಕಳಲ್ಲಿ ತೂಕ ಹೆಚ್ಚಾಗಿದೆ, ಶೇ.26.90 ಮಕ್ಕಳಿಗೆ ತಲೆ ನೋವು, ಕಿರಿಕಿರಿ ಉಂಟು ಮಾಡಿದ್ದರೆ, ಶೇ.22.40 ಮಕ್ಕಳು ಕಣ್ಣು ತುರಿಕೆ ಸಮಸ್ಯೆ ಅನುಭವಿಸಿದ್ದಾರೆ. ಶೇ.23.90 ಮಕ್ಕಳು ತಮ್ಮ ಸಾಮಾನ್ಯ ದಿನಚರಿ ಬಿಟ್ಟಿದ್ದಾರೆ. ಶೇ.36.80 ಮಕ್ಕಳು ಹಠವಾದಿಗಳಾಗಿದ್ದಾರಂತೆ.
ಆ ಸಂಸ್ಥೆಯ ಪಿಡಿಯಾಟ್ರಿಕ್ಸ್ ವಿಭಾಗದ ವೈದ್ಯಕೀಯ ಅಧೀಕ್ಷಕ ಮತ್ತು ಹಿರಿಯ ಪ್ರಾಧ್ಯಾಪಕ ಡಾಕ್ಟರ್ ಅಶೋಕ್ ಗುಪ್ತಾ ಅವರು ಅಧ್ಯಯನ ರೂಪಿಸಿದ್ದರು. ಸಾಮಾಜಿಕ ಜಾಲತಾಣ, ಎಲೆಕ್ಟ್ರಾನಿಕ್ ಪ್ಲಾಟ್ ಫಾರ್ಮ್ ಮಾಧ್ಯಮದಲ್ಲಿ ಡೇಟಾ ಸಂಗ್ರಹಿಸಲಾಗಿತ್ತು.