ಮುಂಬೈ: ಕೊರೊನಾ ವೈರಸ್‌ನಿಂದ ಬಚಾವಾಗಲು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಲುವಾಗಿ ಜನ ವಿವಿಧ ಹೊಸ ವಿಧಾನಗಳನ್ನು ಕಂಡುಕೊಳ್ಳುತ್ತಿದ್ದಾರೆ.
ಮಹಾರಾಷ್ಟ್ರದ ಗ್ರಾಮೀಣ ಪ್ರದೇಶದ ಅಂಗಡಿಕಾರನೊಬ್ಬ ಮಾಡಿದ ತಂತ್ರಜ್ಞಾನ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭರತ್ ಪಟೇಲ್ ಎಂಬುವವರು ವಿಡಿಯೋವೊಂದನ್ನು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ್ದು, ಅದು 18,400 ಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ. 254 ಜನ ರೀ ಟ್ವೀಟ್ ಮಾಡಿದ್ದಾರೆ. 1100 ಜನ ವಿಡಿಯೋ ಲೈಕ್ ಮಾಡಿದ್ದಾರೆ.
ವಿಡಿಯೋದಲ್ಲಿ ಅಂಗಡಿಕಾರ ತನ್ನ ಅಂಗಡಿಯ ಎದುರು ಸುಮಾರು 15 ಅಡಿ ದೂರದವರೆಗೆ ಕೆಲವು ಸ್ಟೀಲ್ ಟೇಬಲ್‌ಗಳನ್ನು ಜೋಡಿಸಿ ಇಟ್ಟಿದ್ದಾರೆ. ಅಂಗಡಿಯ ಸಮೀಪ ಹಳೆಯ ಒಂದು ಸೈಕಲ್‌ನ್ನು ಉಲ್ಟಾ ಮಲಗಿಸಿ ಅದರ ಚೈನ್‌ಗೆ ತಂತಿ ಜೋಡಿಸಿ ತಂತಿಯನ್ನು ಟೇಬಲ್ ಮೇಲೆ ಕಟ್ಟಿ ಅದಕ್ಕೆ ಒಂದು ಪ್ಲಾಸ್ಟಿಕ್ ಟಬ್ ಜೋಡಿಸಿದ್ದಾರೆ.
ಗ್ರಾಹಕರಿಗೆ ಬೇಕಾದ ಸಾಮಗ್ರಿಗಳನ್ನು ಟಬ್‌ನಲ್ಲಿ ಇಟ್ಟು ಪೆಡಲ್ ತಿರುಗಿಸಿದರೆ ಅದು ಸರ್ರನೆ ಟೇಬಲ್ ಮೇಲೆ ಚಲಿಸಿ ದೂರದಲ್ಲಿ ನಿಂತವರಿಗೆ ತಲುಪುತ್ತದೆ. ಪೆಡಲ್ ವಾಪಸ್ ತಿರುಗಿಸಿದರೆ ಗ್ರಾಹಕರು ನೀಡಿದ ಹಣವನ್ನು ಟಬ್ ಮೂಲಕವೇ ಪಡೆದುಕೊಳ್ಳಬಹುದು. ಹಳ್ಳಿಗನ ತಂತ್ರಜ್ಞಾನಕ್ಕೆ ನೆಟ್ಟಿಗರು ಶಹಬಾಸ್ ಎಂದಿದ್ದಾರೆ.