ಜೀವನದಲ್ಲಿ ಒಮ್ಮೆಯಾದರೂ ವಿಮಾನಯಾನ ಮಾಡಬೇಕು ಅನ್ನೋ ಕನಸು ಅನೇಕರಿಗೆ ಇರುತ್ತೆ. ಮೊದಲನೇ ಬಾರಿಗೆ ವಿಮಾನ ಏರಿದಾಗಲಂತೂ ಭಯ ಹಾಗೂ ಖುಷಿ ಒಟ್ಟೊಟ್ಟಿಗೆ ಇರುತ್ತೆ.
ಅನೇಕರು ವಿಮಾನಯಾನ ಕೈಗೊಳ್ಳುವ ಮುನ್ನ ದೇವರಿಗೆ ಪ್ರಾರ್ಥನೆ ಸಲ್ಲಿಸೋದು ಹೀಗೆ ನಾನಾ ನಂಬಿಕೆಯನ್ನ ಹೊಂದಿರ್ತಾರೆ. ಆದರೆ ನಮ್ಮೆಲ್ಲ ನಂಬಿಕೆಗಳು ವಿಮಾನಯಾನಕ್ಕೆ ಸುರಕ್ಷಿತ ಎಂದು ಹೇಳಲು ಅಗೋದಿಲ್ಲ. ನಮ್ಮ ವಿವಿಧ ಕ್ರಿಯೆಯಿಂದಾಗಿ ವಿಮಾನಕ್ಕೆ ಹಾನಿ ಉಂಟಾಗುವ ಸಾಧ್ಯತೆ ಇರುತ್ತೆ. ಚೀನಾದ ಮಧ್ಯ ಶಾಂಡೊಂಗ್ ಪ್ರಾಂತ್ಯದಲ್ಲಿ ಇಂತಹದ್ದೇ ಒಂದು ವಿಚಿತ್ರ ಘಟನೆ ಸಂಭವಿಸಿದೆ.
ಅದೃಷ್ಟದ ಜೊತೆ ವಿಮಾನಯಾನ ಮಾಡಬೇಕು ಎಂದು ಪ್ರಯಾಣಿಕನೊಬ್ಬ ಮಾಡಿದ ಒಂದೇ ಒಂದು ಕೆಲಸದಿಂದಾಗಿ ವಿಮಾನವೇ ರದ್ದಾದ ಘಟನೆ ನಡೆದಿದೆ. ಈ ವ್ಯಕ್ತಿ ವಿಮಾನದ ಇಂಜಿನ್ಗೆ ನಾಣ್ಯಗಳನ್ನ ಎಸೆದಿದ್ದ ಎನ್ನಲಾಗಿದೆ. ಈ ರೀತಿ ಮಾಡೋದ್ರಿಂದ ಅದೃಷ್ಟ ಒಲಿಯಲಿದೆ ಎಂಬುದು ಪ್ರಯಾಣಿಕನ ನಂಬಿಕೆಯಾಗಿತ್ತಂತೆ.
ವೇಫಾಂಗ್ ಎಂಬ ವಿಮಾನ ನಿಲ್ದಾಣದಲ್ಲಿ ಈ ಘಟನೆ ಸಂಭವಿಸಿದೆ. ಅಂದಹಾಗೆ ಈತ ಒಬ್ಬ ಪುರುಷ ಪ್ರಯಾಣಿಕನಾಗಿದ್ದು ಈತನ ಹೆಸರು ವಾಂಗ್ ಎಂಬ ಶಬ್ದದಿಂದ ಕೊನೆಗಾಣುತ್ತೆ ಎಂದು ವಿಮಾನಯಾನ ಸಿಬ್ಬಂದಿ ಹೇಳಿದ್ದಾರೆ. ಈತ ಅದೃಷ್ಟ ಸಿಗುತ್ತೆ ಎಂಬ ಕಾರಣಕ್ಕೆ ಎಂಜಿನ್ಗೆ ನಾಣ್ಯಗಳನ್ನು ಎಸೆದಿದ್ದನಂತೆ .
ಆದರೆ ಇಂಜಿನ್ನಲ್ಲಿ ನಾಣ್ಯಗಳು ಸಿಲುಕಿರುವ ಬಗ್ಗೆ ಸಿಬ್ಬಂದಿಗೆ ಕೂಡಲೇ ಅರಿವಾಗಿದೆ. ಹೀಗಾಗಿ ವಿಮಾನಯಾನ ರದ್ದು ಮಾಡಿ ನಾಣ್ಯಗಳ ಹುಡುಕಾಟಕ್ಕೆ ಮುಂದಾಗಿದ್ದಾರೆ. ಈತ ಕೆಂಪು ಕಾಗದದ ಒಳಗೆ 6 ನಾಣ್ಯಗಳನ್ನ ಇಟ್ಟು ಅದನ್ನ ಇಂಜಿನ್ಗೆ ಎಸೆದಿದ್ದನಂತೆ. ಈ ನಾಣ್ಯದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.