ಕೇಂದ್ರ ಕೈಗಾರಿಕಾ ಭದ್ರತಾ ಪಡೆ ಹಾಗೂ ಗುಪ್ತಚರ ಇಲಾಖೆ ದೆಹಲಿ ಇಂದಿರಾ ಗಾಂಧಿ ವಿಮಾನ ನಿಲ್ದಾಣದಲ್ಲಿ ಸಿಹಿ ತಿಂಡಿ ಡಬ್ಬಿಯಲ್ಲಿದ್ದ ಬರೋಬ್ಬರಿ 10 ಲಕ್ಷ ರೂಪಾಯಿ ಮೌಲ್ಯದ ನೋಟುಗಳನ್ನ ಪತ್ತೆ ಮಾಡಿದೆ.
ನವೆಂಬರ್ 26ರ ಸಂಜೆ 5.45ರ ಸುಮಾರಿಗೆ ಟರ್ಮಿನಲ್ 3ರಲ್ಲಿ ಪ್ರಯಾಣಿಕರು ಅನುಮಾನಸ್ಪದ ಕಾರ್ಯಗಳನ್ನ ಮಾಡುತ್ತಿರೋದನ್ನ ಭದ್ರತಾ ಪಡೆ ಗಮನಿಸಿದೆ.
ಪ್ರಯಾಣಿಕನಿಗೆ ಎಕ್ಸ್ ರೇ ಸ್ಕಾನಿಂಗ್ ಮಾಡುತ್ತಿದ್ದ ವೇಳೆ ಸಿಐಎಸ್ಎಫ್ ಪಡೆ ಸಿಹಿ ತಿಂಡಿ ಡಬ್ಬಿಯಲ್ಲಿ 10 ಲಕ್ಷ ರೂಪಾಯಿ ಮೌಲ್ಯದ ಕರೆನ್ಸಿ ಇರೋದನ್ನ ಪತ್ತೆ ಮಾಡಿದೆ.
ಈ ಪ್ರಯಾಣಿಕರನ್ನ ತಡೆಹಿಡಿದ ಸಿಐಎಸ್ಎಫ್ ಸಿಬ್ಬಂದಿ ಕಸ್ಟಮ್ಸ್ ಅಧಿಕಾರಿಗಳಿಗೆ ಪ್ರಕರಣ ಹಸ್ತಾಂತರಿಸಿದ್ದಾರೆ. ಅಧಿಕಾರಿಗಳ ಸಮ್ಮುಖದಲ್ಲೇ ಶೋಧ ಕಾರ್ಯ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಬ್ಯಾಗ್ನಲ್ಲಿ ಕರೆನ್ಸಿ ಪತ್ತೆ ಹಚ್ಚಿದ್ದಾರೆ.
ಸಿಹಿ ತಿಂಡಿ ಬಾಕ್ಸ್ನಲ್ಲಿ ಸೌದಿ ಹಾಗೂ ಯುಎಇ ಕರೆನ್ಸಿ ಇದ್ದು ಇವುಗಳ ಒಟ್ಟು ಮೌಲ್ಯ 10 ಲಕ್ಷ ರೂಪಾಯಿ ಆಗಿದೆ. ಇನ್ನು ಈ ಬ್ಯಾಗ್ನ್ನ ಹೊಂದಿದ್ದ ಪ್ರಯಾಣಿಕನನ್ನ ಮೊಹಮ್ಮದ್ ಆದಿಲ್ ಎಂದು ಗುರುತಿಸಲಾಗಿದೆ.
ಈತ ಬ್ಯಾಗ್ ಸಮೇತ ದುಬೈಗೆ ಪ್ರಯಾಣ ಬೆಳೆಸಲು ತಯಾರಿ ನಡೆಸಿದ್ದ. ವಿಚಾರಣೆ ವೇಳೆ ಆತ ಕರೆನ್ಸಿ ಸಾಗಿಸಲು ಬೇಕಾದ ಯಾವುದೇ ಮಾನ್ಯ ದಾಖಲೆಗಳನ್ನ ತೋರಿಸುವಲ್ಲಿ ವಿಫಲನಾಗಿದ್ದಾನೆ.