ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಯಲ್ಲಿ 22 ವರ್ಷದ ವೈದ್ಯಕೀಯ ವಿದ್ಯಾರ್ಥಿನಿಯೊಬ್ಬಳನ್ನು ಆಕೆಯ ತಂದೆ, ಸಹೋದರ ಮತ್ತು ಇತರ ಮೂವರು ಸೇರಿ ಕತ್ತು ಹಿಸುಕಿ ಕೊಂದು, ನಂತರ ಶವವನ್ನು ಸುಟ್ಟು ಹಾಕಿದ್ದಾರೆ. ಸಂತ್ರಸ್ತೆ ಶುಭಾಂಗಿ ಜೋಗದಂದ್ ಎಂಬಾಕೆಯನ್ನು ಆಕೆಯ ಕುಟುಂಬ ಸದಸ್ಯರು ಹಗ್ಗದಿಂದ ಬಿಗಿದು ಕೊಂದಿದ್ದಾರೆ. ನಂತರ ಮೃತದೇಹಕ್ಕೆ ಬೆಂಕಿ ಹಚ್ಚಿದ್ದು, ಸಾಕ್ಷ್ಯ ನಾಶಪಡಿಸಲು ಅವಶೇಷಗಳನ್ನು ಹೊಳೆಯಲ್ಲಿ ಎಸೆದಿದ್ದಾರೆ.
ಮುಂಬೈನಿಂದ ಸುಮಾರು 600 ಕಿಮೀ ದೂರದಲ್ಲಿರುವ ಲಿಂಬಗಾಂವ್ ಪೊಲೀಸ್ ಠಾಣೆ ವ್ಯಾಪ್ತಿಯ ಪಿಂಪ್ರಿ ಮಹಿಪಾಲ್ ಗ್ರಾಮದಲ್ಲಿ ನಡೆದ ಮರ್ಯಾದಾ ಹತ್ಯೆ ಇದು. ಹತ್ಯೆಗೆ ಸಂಬಂಧಿಸಿದಂತೆ ಐವರನ್ನು ಪೊಲೀಸರು ಈಗಾಗ್ಲೇ ಬಂಧಿಸಿದ್ದಾರೆ. ಕೊಲೆಯಾದ ಯುವತಿ ಬ್ಯಾಚುಲರ್ ಆಫ್ ಹೋಮಿಯೋಪತಿಕ್ ಮೆಡಿಸಿನ್ ಮತ್ತು ಸರ್ಜರಿ ಓದುತ್ತಿದ್ದಳು. ಬಿಎಚ್‌ಎಂಎಸ್‌ನ ಮೂರನೇ ವರ್ಷದ ವಿದ್ಯಾರ್ಥಿನಿಯಾಗಿದ್ದಳು. ಆಕೆಯ ಕುಟುಂಬಸ್ಥರು ಬಲವಂತವಾಗಿ ಮದುವೆ ನಿಶ್ಚಯ ಮಾಡಿದ್ದರು.
ಆದರೆ ಶುಭಾಂಗಿ ತನ್ನದೇ ಗ್ರಾಮದ ಮತ್ತೊಬ್ಬ ವ್ಯಕ್ತಿಯನ್ನು ಪ್ರೀತಿಸುತ್ತಿರುವುದಾಗಿ ಮನೆಯವರು ಆಯ್ಕೆ ಮಾಡಿದ ವ್ಯಕ್ತಿಗೆ ತಿಳಿಸಿದ್ದಾಳೆ. ಮದುವೆ ರದ್ದಾಗಿದ್ದರಿಂದ ಶುಭಾಂಗಿ ಮನೆಯವರು ಆಕ್ರೋಶಗೊಂಡಿದ್ದರು. ಜನವರಿ 22 ರಂದು ರಾತ್ರಿ ಶುಭಾಂಗಿಯನ್ನು ಆಕೆಯ ತಂದೆ, ಸಹೋದರ, ಚಿಕ್ಕಪ್ಪ ಮತ್ತು ಸೋದರ ಸಂಬಂಧಿಗಳು ಜಮೀನಿಗೆ ಕರೆದೊಯ್ದರು. ಅಲ್ಲಿ ಯುವತಿಯನ್ನು ಕೊಂದು ಸಾಕ್ಷ್ಯವನ್ನು ನಾಶಪಡಿಸಲು ಪ್ರಯತ್ನಿಸಿದ್ದಾರೆ.