ಕೊರೊನಾ ವೈರಸ್ ಗೆದ್ದು ಬಂದ ರೋಗಿಗಳಿಗೆ ಮತ್ತೆ ಸೋಂಕು ಕಾಣಿಸಿಕೊಳ್ಳುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಇಂತಹ ಅನೇಕ ಪ್ರಕರಣಗಳು ಬೆಳಕಿಗೆ ಬರ್ತಿವೆ. ಇದು ಜನರಲ್ಲಿ ಆತಂಕ ಮೂಡಿಸಿದೆ.
ಕೊರೊನಾ ಸೋಂಕಿತರ ಸಂಖ್ಯೆ ಪ್ರತಿ ದಿನ ಹೆಚ್ಚಾಗ್ತಿದೆ. ಈ ಮಧ್ಯೆ ಒಮ್ಮೆ ಗುಣಮುಖರಾದವರಿಗೆ ಕೊರೊನಾ ಕಾಣಿಸಿಕೊಳ್ತಿರುವುದು ಮಾತ್ರ ಮತ್ತೆ ಆತಂಕ ಮೂಡಿಸಿದೆ. ದೆಹಲಿಯ ಸಿಎಸ್‌ಐಆರ್‌ನ ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ ಸಂಶೋಧನೆಯಲ್ಲಿ ಮರು ಸೋಂಕು ಬಹಿರಂಗವಾಗಿದೆ. ಇದರಲ್ಲಿ, ನೋಯ್ಡಾದ ಎರಡು ಸೋಂಕಿತರು ಮತ್ತು ಮುಂಬೈನ ನಾಲ್ಕು ಆರೋಗ್ಯ ಕಾರ್ಯಕರ್ತರು ಮರು ಸೋಂಕಿಗೆ ಒಳಗಾಗಿದ್ದಾರೆ.
ದೆಹಲಿಯ ಇನ್‌ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಅಂಡ್ ಇಂಟಿಗ್ರೇಟಿವ್ ಬಯಾಲಜಿ ನಡೆಸಿದ ಸಂಶೋಧನೆಯ ಪ್ರಕಾರ, ನೋಯ್ಡಾ ಜಿಮ್ಸ್ ನ ಇಬ್ಬರು ಆರೋಗ್ಯ ಕಾರ್ಯಕರ್ತರಿಗೆ ಮರು ಸೋಂಕು ಕಾಣಿಸಿಕೊಂಡಿದೆ. ಇನ್ಸ್ಟಿಟ್ಯೂಟ್ ಆಫ್ ಜೀನೋಮಿಕ್ಸ್ ಮತ್ತು ಇಂಟಿಗ್ರೇಟಿವ್ ಬಯಾಲಜಿ ತಂಡವು ಈವರೆಗೆ ದೇಶಾದ್ಯಂತದ 16 ಆರೋಗ್ಯ ಕಾರ್ಯಕರ್ತರ ಮಾದರಿಗಳನ್ನು ಪರಿಶೀಲಿಸಿದೆ.
ನೋಯ್ಡಾದಲ್ಲಿ 25 ವರ್ಷದ ಪುರುಷ ಹಾಗೂ 28 ವರ್ಷದ ಮಹಿಳೆಗೆ ಮತ್ತೆ ಸೋಂಕು ಕಾಣಿಸಿಕೊಂಡಿದೆ. ಇಬ್ಬರೂ ಕ್ವಾರಂಟೈನ್ ನಲ್ಲಿಯೇ ಇದ್ದರು ಎನ್ನಲಾಗಿದೆ. ಹೀಗಿದ್ದೂ ಅವರಿಗೆ ಕೊರೊನಾ ಮತ್ತೆ ಹೇಗೆ ಬಂತು ಎಂಬ ಪ್ರಶ್ನೆ ಮೂಡಿದೆ. ರೋಗ ನಿರೋಧಕ ಶಕ್ತಿ ಹೆಚ್ಚಾದಂತೆ ಶಕ್ತಿ ಕಳೆದುಕೊಳ್ಳುವ ವೈರಸ್, ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆಯಾದಂತೆ ಮತ್ತೆ ತನ್ನ ಆಟ ಶುರು ಮಾಡುತ್ತದೆ ಎನ್ನಲಾಗ್ತಿದೆ. ತಜ್ಞರ ಪ್ರಕಾರ, ಕೊರೊನಾ ವೈರಸ್ ಕಾಯಿಲೆಯಿಂದ ಸಂಪೂರ್ಣವಾಗಿ ಗುಣಮುಖರಾದ ಶೇಕಡಾ 14 ರಷ್ಟು ಜನರು ಮತ್ತೆ ಸೋಂಕಿಗೆ ಒಳಗಾಗುವ ಸಾಧ್ಯತೆಯಿದೆ. ನೋಯ್ಡಾ, ದೆಹಲಿ, ಮುಂಬೈ ಮತ್ತು ತೆಲಂಗಾಣದಿಂದ ಬರುತ್ತಿರುವ ಈ ಪ್ರಕರಣಗಳು ಜನರಲ್ಲಿ ಮತ್ತಷ್ಟು ಚಿಂತೆ ಮೂಡಲು ಕಾರಣವಾಗಿದೆ.