ಕೊಯಮತ್ತೂರು: ತಮಿಳುನಾಡಿನ ಕೊಯಮತ್ತೂರು ಸಮೀಪದ ಕೊವಿಲಮಡು ಪ್ರಾಂತ್ಯದ ಮನೆಯೊಂದರಲ್ಲಿ ಹಾವು ಮರಿಗಳೊಂದಿಗೆ ಪತ್ತೆಯಾಗಿದೆ. ಒಂದಲ್ಲ ಎರಡಲ್ಲ, ಬರೊಬ್ಬರಿ 35 ಮರಿ ಹಾಗೂ ತಾಯಿ ಹಾವುಗಳು ಬಾತ್ ರೂಂನ ಸಂಧಿಯಲ್ಲಿದ್ದವು…!
ಮುರಳಿ ಎಂಬ ಉರಗ ತಜ್ಞರ ಸಹಾಯದಿಂದ ಹಿಡಿದು ಚೀಲದಲ್ಲಿ ಹಾಕಿ ಅನೈಕಟ್ಟಿ ಅರಣ್ಯದಲ್ಲಿ ಬಿಡಲಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ಫೋಟೋಗಳನ್ನು ಟ್ವೀಟ್ ಮಾಡಿದೆ. ಈ ಫೋಟೋ ಹಾಕುತ್ತಿದ್ದಂತೆ ಮೈಕ್ರೋ ಬ್ಲಾಗರ್ ನಲ್ಲಿ ಸಾಕಷ್ಟು ಚರ್ಚೆಯನ್ನು ಹುಟ್ಟುಹಾಕಿದೆ.
ರಸ್ಸೆಲ್ಸ್ ಜಾತಿಯ ಹಾವುಗಳು ಇವಾಗಿದ್ದು, ಮಾರಣಾಂತಿಕ ವಿಷವನ್ನು ಹೊಂದಿಲ್ಲ. ಹಾವು ಎಂದರೆ ಭಯ ಜಾಸ್ತಿ ಕಾಡಿನಲ್ಲಷ್ಟೇ ಅಲ್ಲದೆ, ಜನವಸತಿ ಪ್ರದೇಶಗಳಲ್ಲೂ ಹಲವು ಬಾರಿ ಹಾವುಗಳು ಕಾಣಿಸಿಕೊಳ್ಳುತ್ತವೆ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ. ಈಗಾಗಲೇ ಸಾವಿರಕ್ಕೂ ಹೆಚ್ಚು ಲೈಕ್ ಗಳು ಬಂದಿದ್ದರೆ, ನೂರಾರು ಕಮೆಂಟ್ ಗಳು ಬಂದಿವೆ. ಈಗಂತೂ ಇಂಟರ್ನೆಟ್ ನಲ್ಲಿ ಹಾವುಗಳ ವಿಡಿಯೋ, ಫೋಟೋಗಳು ಸಖತ್ ವೈರಲ್ ಆಗುತ್ತಿವೆ.