ಸರ್ಕಾರದ ವಿವಿಧ ಹಂತಗಳ ಹುದ್ದೆಗಳಲ್ಲಿ ಕೆಲಸ ಮಾಡುವ ನೌಕರರ ವೇತನಗಳು ಹಾಗೂ ಸೌಲಭ್ಯಗಳಲ್ಲಿ ಇರುವ ವ್ಯತ್ಯಾಸದ ಕುರಿತಂತೆ ಚಿತ್ರವೊಂದನ್ನು ಶೇರ್ ಮಾಡಿರುವ ಕಾಂಗ್ರೆಸ್ ನಾಯಕ ಶಶಿ ತರೂರ್, ಈ ಬಗ್ಗೆ ಚರ್ಚೆಗೆ ನಾಂದಿ ಹಾಡಿದ್ದಾರೆ.
ಯುಜಿಸಿ ಅಡಿ ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಕೊಡಲಾಗುತ್ತಿರುವ ವೇತನದ ಕುರಿತ ಚಿತ್ರವೊಂದನ್ನು ತರೂರ್ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯುಜಿಸಿ ಮಟ್ಟದ ಸಹಾಯಕ ಪ್ರಾಧ್ಯಾಪಕರೊಬ್ಬರ ಮಾಸಿಕ ವೇತನ 15,600-39,100 ರೂ.ಗಳು ಇದ್ದರೆ, ಕಸ ಗುಡಿಸುವವರ ವೇತನ ಶ್ರೇಣಿಯು 16,500-35,700 ರೂ.ಗಳಷ್ಟಕ್ಕೆ ಮೂರು ವರ್ಷಗಳಲ್ಲಿ ಏರಿಕೆಯಾಗುವ ಸಾಧ್ಯತೆಯನ್ನು ತರೂರ್ ಹೈಲೈಟ್ ಮಾಡಿದ್ದಾರೆ.
“ಕಸ ಗುಡಿಸುವವರು ಚೆನ್ನಾಗಿ ದುಡಿಯುತ್ತಿದ್ದಾರೆ ಎಂದು ನಾವೆಲ್ಲರೂ ಖುಷಿ ಪಟ್ಟರೆ, ಮತ್ತೊಂದೆಡೆ ಉನ್ನತ ವ್ಯಾಸಂಗಕ್ಕಾಗಿ ಹಗಲಿರುಳು ಶ್ರಮಪಡುವ ಸಹಾಯಕ ಪ್ರಾಧ್ಯಾಪಕರು ಕಡಿಮೆ ವೇತನ ಪಡೆಯುತ್ತಿದ್ದಾರೆ” ಎಂದು ಸರ್ಕ್ಯೂಲರ್ ಒಂದನ್ನು ಶೇರ್ ಮಾಡಿಕೊಂಡ ತರೂರ್ ತಿಳಿಸಿದ್ದಾರೆ.
ಆದರೆ ಕೆಲವರು ಇದಕ್ಕೆ ಅಪಸ್ವರ ಎತ್ತಿದ್ದು, ಈಗ ವೇತನದಲ್ಲಿ ಬದಲಾವಣೆಯಾಗಿದೆ. ಸಹಾಯಕ ಪ್ರಾಧ್ಯಾಪಕರು ಉತ್ತಮ ವೇತನ ಪಡೆಯುತ್ತಿದ್ದಾರೆ. ಈ ವಿಚಾರದಲ್ಲಿ ನಿಮಗೆ ತಪ್ಪು ಮಾಹಿತಿ ನೀಡಲಾಗಿದೆ ಎಂದಿದ್ದಾರೆ.