ಭಾರತ ತೀವ್ರ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದ್ದು, ಇದರಿಂದ ಹೊರಬರಲು ಮತ್ತೊಬ್ಬ ಮನಮೋಹನ್ ಸಿಂಗ್ ಅವಶ್ಯಕತೆ ಇದೆ ಎಂದು ಎನ್.ಸಿ.ಪಿ. ಮುಖ್ಯಸ್ಥ, ಮಾಜಿ ಕೇಂದ್ರ ಸಚಿವ ಶರದ್ ಪವಾರ್ ಅಭಿಪ್ರಾಯಪಟ್ಟಿದ್ದಾರೆ.
ಶಿವಸೇನೆ ಮುಖವಾಣಿ ‘ಸಾಮ್ನಾ’ ಗೆ ನೀಡಿರುವ ಸಂದರ್ಶನದಲ್ಲಿ ಈ ಅಭಿಪ್ರಾಯ ವ್ಯಕ್ತಪಡಿಸಿರುವ ಅವರು, ಈ ಹಿಂದೆಯೂ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಅದನ್ನು ಸರಿ ದಾರಿಗೆ ತರುವಲ್ಲಿ ನರಸಿಂಹರಾವ್ ಹಾಗೂ ಮನಮೋಹನ್ ಸಿಂಗ್ ಯಶಸ್ವಿಯಾಗಿದ್ದರು ಎಂದು ಹೇಳಿದ್ದಾರೆ.
ಹತ್ತು ವರ್ಷಗಳ ಕಾಲ ಪ್ರಧಾನಿಯಾಗಿ ದೇಶವನ್ನು ಮನಮೋಹನ್ ಸಿಂಗ್ ಸಮರ್ಥವಾಗಿ ಮುನ್ನಡೆಸಿದ್ದರು ಎಂದು ಹೇಳಿರುವ ಶರದ್ ಪವಾರ್, ಆರ್ಥಿಕ ತಜ್ಞರಾಗಿರುವ ಅವರಿಗೆ ದೂರದರ್ಶಿತ್ವವಿದೆ ಎಂದಿದ್ದಾರೆ.