ನವದೆಹಲಿ: ದೇಶದಲ್ಲಿ ಆಸ್ಟ್ರಾಜೆನಿಕಾ ಸಂಭಾವ್ಯ ಕೊರೊನಾ ಲಸಿಕೆ ಪ್ರಯೋಗ ಪ್ರಗತಿಯಲ್ಲಿದೆ ಎಂದು ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಬುಧವಾರ ತಿಳಿಸಿದೆ.
ಆಸ್ಟ್ರಾಜೆನಿಕಾ ಜಾಗತಿಕ ಪ್ರಯೋಗಗಳನ್ನು ನಿಲ್ಲಿಸಲು ನಿರ್ಧರಿಸಿದೆ ಎಂದು ಹೇಳಲಾಗಿದ್ದು, ಭಾರತದಲ್ಲಿ ಮಾತ್ರ ಲಸಿಕೆ ಪ್ರಯೋಗಗಳನ್ನು ನಿಲ್ಲಿಸದಿರಲು ಸೀರಮ್ ಇನ್ಸ್ಟಿಟ್ಯೂಟ್ ತೀರ್ಮಾನಿಸಿದೆ.
ಲಸಿಕೆಯ ಹೆಚ್ಚಿನ ಪರಿಶೀಲನೆಗಾಗಿ ಪ್ರಯೋಗ ಸ್ಥಗಿತಗೊಳಿಸಲಾಗಿದೆ. ಯುಕೆನಲ್ಲಿ ನಡೆದ ಪ್ರಯೋಗಗಳ ಬಗ್ಗೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಸದ್ಯಕ್ಕೆ ಯಾವುದೇ ಸಮಸ್ಯೆಯಾಗಿಲ್ಲವೆಂದು ಹೇಳಲಾಗಿದೆ.
ಆಸ್ಟ್ರಾಜೆನಿಕಾ ಮತ್ತು ಆಕ್ಸ್ ಫರ್ಡ್ ವಿಶ್ವವಿದ್ಯಾನಿಲಯದ ಸಹಯೋಗದಲ್ಲಿ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಕೋವಿಡ್ ಲಸಿಕೆಯನ್ನು ಅಭಿವೃದ್ಧಿಪಡಿಸುತ್ತಿದ್ದು, ಭಾರತದಲ್ಲಿಯೂ ಪ್ರಯೋಗದ ಹಂತದಲ್ಲಿದೆ. ಜಾಗತಿಕವಾಗಿ ಪ್ರಯೋಗಗಳ ನಿಲುಗಡೆಯಾಗಿದೆ. ಭಾರತದಲ್ಲಿ ಮಾತ್ರ ಪ್ರಯೋಗ ನಿಲ್ಲಿಸದಿರಲು ತೀರ್ಮಾನಿಸಲಾಗಿದೆ.
ಆಸ್ಟ್ರಾಜೆನಿಕಾ ಮೂರನೇ ಹಂತದ ಪ್ರಯೋಗಗಳನ್ನು ಯುನೈಟೆಡ್ ಕಿಂಗ್ಡಮ್ ನಲ್ಲಿ ನಿಲ್ಲಿಸಿದೆ. ಪ್ರಯೋಗದಲ್ಲಿ ಭಾಗಿಯಾದವರಲ್ಲಿ ಅನಾರೋಗ್ಯ ಉಂಟಾದ ಕಾರಣಕ್ಕೆ ಕೊನೆಯ ಹಂತದ ಪ್ರಯೋಗಗಳು ಸೇರಿದಂತೆ ಜಾಗತಿಕ ಪ್ರಯೋಗಗಳನ್ನು ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ.
ಆದರೆ ಅಸ್ಟ್ರಾಜೆನಿಕಾ ರೋಗಿಗಳಲ್ಲಿ ಉಂಟಾಗಿರುವ ಪ್ರತಿಕೂಲ ಪ್ರತಿಕ್ರಿಯೆಯ ಸ್ವರೂಪದ ಬಗ್ಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸಲು ಸಮಿತಿಯನ್ನು ರಚಿಸಲಾಗಿದೆ. ಸ್ವಯಂಪ್ರೇರಣೆಯಿಂದ ಲಸಿಕೆ ಪ್ರಯೋಗಕ್ಕೆ ವಿರಾಮ ಹಾಕಲಾಗಿದೆ ಎಂದು ಅಸ್ಟ್ರಾಜೆನಿಕಾ ಹೇಳಿದೆ.