ಲಸಿಕೆ ತಯಾರಕ ಸಂಸ್ಥೆಯಾದ ಸೇರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ನಿರ್ಮಾಣ ಹಂತದಲ್ಲಿರುವ ಕಟ್ಟಡವೊಂದರಲ್ಲಿ ಅಗ್ನಿ ಅವಘಡ ಸಂಭವಿಸಿದೆ. ಪುಣೆಯಲ್ಲಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಈ ಅವಘಡ ಸಂಭವಿಸಿತ್ತು. ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯ ಹಾಗೂ ಆಸ್ಟ್ರೇಜೆನಿಕಾ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಿದ ಕೊರೊನಾ ಲಸಿಕೆಯಾದ ಕೋವಿಶೀಲ್ಡ್ನ್ನು ಸೇರಂ ಉತ್ಪಾದನೆ ಮಾಡುತ್ತಿದೆ. ಅಗ್ನಿ ಅವಘಡದಿಂದ ಲಸಿಕೆ ತಯಾರಿಕಾ ಘಟಕಕ್ಕೆ ಯಾವುದೇ ಸಮಸ್ಯೆಯಾದ ಬಗ್ಗೆ ವರದಿಯಾಗಿಲ್ಲ.
ಕಟ್ಟಡದಲ್ಲಿ ಐವರು ಸಿಲುಕಿದ್ದರು ಎನ್ನಲಾಗಿದ್ದು ಎಲ್ಲರನ್ನೂ ರಕ್ಷಿಸಲಾಗಿದೆ. ಪರಿಸ್ಥಿತಿಯನ್ನ ನಿಯಂತ್ರಣಕ್ಕೆ ತರಲು ಅಗ್ನಿಶಾಮಕ ದಳ ಸಿಬ್ಬಂದಿ ಮೂರು ಗಂಟೆಗಳ ಸಮಯವನ್ನ ತೆಗೆದುಕೊಂಡ್ರು. ಅಗ್ನಿ ಅವಘಡಕ್ಕೆ ಕಾರಣ ಇನ್ನೂ ತಿಳಿದು ಬಂದಿಲ್ಲ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ಹೇಳಿದ್ದಾರೆ.
ಕಟ್ಟಡದಲ್ಲಿ ಸಿಲುಕಿದ್ದ ಒಂದಿಬ್ಬರು ಮಂದಿಯನ್ನ ರಕ್ಷಿಸೋದು ನಮ್ಮ ಮೊದಲ ಆದ್ಯತೆಯಾಗಿದೆ. ಅಗ್ನಿ ಅವಘಡದಲ್ಲಿ ಎಷ್ಟು ಹಾನಿಯಾಗಿದೆ ಅನ್ನೋದರ ಬಗ್ಗೆ ನಂತರದಲ್ಲಿ ಮಾಹಿತಿ ಕಲೆ ಹಾಕುತ್ತೇವೆ ಎಂದು ಸೇರಂ ಸಿಇಓ ಆಧಾರ್ ಪೂನಾವಲಾ ಹೇಳಿದ್ದಾರೆ.
ವಿಶ್ವದ ಅತಿದೊಡ್ಡ ಲಸಿಕೆ ತಯಾರಕ ಸೇರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪುಣೆಯ 100 ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಭವಿಷ್ಯದಲ್ಲಿ ಸಾಂಕ್ರಾಮಿಕ ರೋಗಗಳನ್ನ ಎದುರಿಸುವ ಸಲುವಾಗಿ ಸುಮಾರು ಎಂಟರಿಂದ ಒಂಭತ್ತು ಕಟ್ಟಡಗಳನ್ನ ನಿರ್ಮಾಣ ಮಾಡಲಾಗ್ತಿದೆ ಎನ್ನಲಾಗಿದೆ.