ಗುಜರಿ ವ್ಯಾಪಾರಿಯ ಮಗ ತನ್ನ ಕುಟುಂಬಕ್ಕೆ ಆಗುತ್ತಿದ್ದ ಅವಮಾನವನ್ನು ಮೀರಿ ವೈದ್ಯಕೀಯ ಪ್ರವೇಶ ಪರೀಕ್ಷೆಯಲ್ಲಿ ಅರ್ಹತೆ ಪಡೆದುಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಡಾಕ್ಟರ್ ಆಗುವ ಕನಸು ಹೊತ್ತ ಉತ್ತರಪ್ರದೇಶದ ಕುಶಿನಗರದ ಜಿಲ್ಲೆಯ ನಿವಾಸಿ ಅರವಿಂದ್ ಒಂಬತ್ತನೇ ಪ್ರಯತ್ನದಲ್ಲಿ ಈ ಸಾಧನೆ ಮಾಡಿರುವುದು ಮತ್ತೊಂದು ವಿಶೇಷ.
2011ರಲ್ಲಿ ಅವರು ಪ್ರವೇಶ ಪರೀಕ್ಷೆ ಮೊದಲ ಬಾರಿ ಪ್ರಯತ್ನಿಸಿದ್ದರು. ಈ ಬಾರಿ ಉತ್ತೀರ್ಣರಾಗಿದ್ದು ಅಖಿಲ ಭಾರತ ಮಟ್ಟದಲ್ಲಿ 11603ನೇ ರ್ಯಾಂಕ್ ಗಳಿಸಿದ್ದು, ಹಿಂದುಳಿದ ವರ್ಗಗಳ ವಿಭಾಗದಲ್ಲಿ 4392ನೇ ರ್ಯಾಂಕ್ ಪಡೆದಿದ್ದಾರೆ.
ಅರವಿಂದ ತಂದೆ ಭಿಕಾರಿ ಐದನೇ ತರಗತಿವರೆಗೆ ಓದಿದ್ದರೆ ತಾಯಿ ಲಲಿತಾ ದೇವಿ ಶಾಲೆ ಮೆಟ್ಟಿಲು ಹತ್ತಿದವರಲ್ಲ. ತಂದೆ ಅಸಾಮಾನ್ಯ ಹೆಸರು ಮತ್ತು ವೃತ್ತಿಯ ಕಾರಣಕ್ಕೆ ಅವಮಾನಕ್ಕೊಳಗಾಗುತ್ತಿದ್ದರು. ಇದನ್ನೇ ಸವಾಲಾಗಿ ಸ್ವೀಕರಿಸಿದ ಅರವಿಂದ, ತಂದೆಯ ಆಸೆ ಪೂರೈಸಲು ಪಣತೊಟ್ಟರು. ಹತ್ತನೇ ತರಗತಿಯಲ್ಲಿ ಶೇ.48.6, ಹನ್ನೆರಡನೇ ತರಗತಿಯಲ್ಲಿ ಶೇ.60ಅಂಕ ಗಳಿಸಿದರು.