ನವದೆಹಲಿ: ದೇಶಾದ್ಯಂತ ಆಗಸ್ಟ್ 15 ರ ನಂತರವೇ ಶಾಲಾ-ಕಾಲೇಜುಗಳನ್ನು ಪುನಾರಂಭ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ.
ದೇಶಾದ್ಯಂತ ಪೋಷಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಕ್ರಮ ಕೈಗೊಂಡಿದೆ. ಜುಲೈ 1 ರಿಂದ ಶಾಲೆಗಳು ಹಂತಹಂತವಾಗಿ ಆರಂಭವಾಗಲಿದೆ ಎಂದು ಹೇಳಲಾಗಿತ್ತು. ಆದರೆ, ದೇಶಾದ್ಯಂತ ಪೋಷಕರು ಮತ್ತು ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಆಗಸ್ಟ್ 15ರ ನಂತರವೇ ಶಾಲಾ ಕಾಲೇಜುಗಳನ್ನು ಆರಂಭಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಚಿಂತನೆ ನಡೆಸಿವೆ.
ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವ ರಮೇಶ್ ನಿಶಾಂಕ್ ಪೋಖ್ರಿಯಾಲ್ ಈ ಕುರಿತು ಸ್ಪಷ್ಟನೆ ನೀಡಿದ್ದು ಆಗಸ್ಟ್ 15ರ ಬಳಿಕ ಶಾಲಾ ಕಾಲೇಜು ಆರಂಭ ಮಾಡಲಾಗುವುದು ಎಂದು ಹೇಳುವ ಮೂಲಕ ಗೊಂದಲಗಳಿಗೆ ತೆರೆ ಎಳೆದಿದ್ದಾರೆ. ರಾಜ್ಯ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಕೂಡ ಆಗಸ್ಟ್ 2 ನೇ ವಾರದ ನಂತರವೇ ಶಾಲೆಗಳನ್ನು ಆರಂಭಿಸುವ ಸುಳಿವು ನೀಡಿದ್ದಾರೆ. ಇದರಿಂದಾಗಿ ಆತಂಕದಲ್ಲಿದ್ದ ಪೋಷಕರು ನಿಟ್ಟುಸಿರು ಬಿಡುವಂತಾಗಿದೆ.