ಮಕ್ಕಳಲ್ಲಿ ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸಲೆಂದು ಪೌರ ನೀತಿ ವಿಷಯವನ್ನು ಶಾಲಾ ಪಠ್ಯಗಳಲ್ಲಿ ಇರುವುದನ್ನು ಕಂಡಿದ್ದೇವೆ, ಖುದ್ದು ನಾವೇ ಓದಿಕೊಂಡು ಬೆಳೆದಿದ್ದೇವೆ. ಆದರೆ ಕೆಲವೊಮ್ಮೆ ಈ ಪುಸ್ತಕ ಜ್ಞಾನಕ್ಕಿಂತಲೂ ಮಿಗಿಲಾಗಿ ವಾಸ್ತವಿಕವಾದ ಚೌಕಟ್ಟಿನಲ್ಲಿ ಮಕ್ಕಳಿಗೆ ಸಾಮಾಜಿಕ ಹೊಣೆಗಾರಿಕೆಯ ಅರಿವು ಮೂಡಿಸುವ ಅಗತ್ಯವಿರುತ್ತದೆ.
ಸಾರ್ವಜನಿಕ ವಾಹನಗಳಲ್ಲಿ ಓಡಾಡುವಾಗ ಇತರ ಪ್ರಯಾಣಿಕರಿಗೆ ತೊಂದರೆ ಕೊಡದಂತೆ ಕೂರುವ ಶಿಸ್ತನ್ನು ಮಕ್ಕಳಲ್ಲಿ ಮೂಡಿಸುವುದು ಅತ್ಯಗತ್ಯವಾಗಿದೆ. ಈ ನಿಟ್ಟಿನಲ್ಲಿ, ಡಾಕ್ಯುಮೆಂಟರಿ ಚಿತ್ರ ನಿರ್ಮಾಪಕ ನೀಲಾ ಮಾಧವ್ ಪಂಡಾ ತಮ್ಮ ಟ್ವಿಟರ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ.
ಶಾಲಾ ಮಕ್ಕಳ ಗುಂಪೊಂದು ಮಾಸ್ಕ್ ಧರಿಸಿಕೊಂಡು ಬಸ್‌ನಲ್ಲಿ ಕುಳಿತಂತೆ ಕೂತಿರುವುದನ್ನು ಕಾಣಬಹುದಾಗಿದೆ. ವಯಸ್ಕ ಮಹಿಳೆಯಂತೆ ವೇಷ ಧರಿಸಿದ ಬಾಲಕಿ ಬರುತ್ತಲೇ ಹುಡುಗನೊಬ್ಬ ಎದ್ದು ನಿಂತು ಆಕೆಗೆ ತನ್ನ ಆಸನ ಬಿಟ್ಟುಕೊಡುತ್ತಾನೆ. ಇದೇ ಸೀನ್‌ನಲ್ಲಿ ಗರ್ಭಿಣಿ ಮಹಿಳೆಯೊಬ್ಬರು ಬಂದಾಗ, ಆಕೆಗೆಂದು ಮತ್ತೊಬ್ಬ ಹುಡುಗ ತನ್ನ ಆಸನವನ್ನು ಬಿಟ್ಟುಕೊಡುವುದನ್ನು ಕಾಣಬಹುದಾಗಿದೆ. “ಎಳವೆಯಲ್ಲಿಯೇ ಒಳ್ಳೆಯ ಅಭ್ಯಾಸಗಳನ್ನು ಮಕ್ಕಳಲ್ಲಿ ಮೂಡಿಸಬೇಕು’’ ಎಂದು ವಿಡಿಯೋದಲ್ಲಿ ಕ್ಯಾಪ್ಷನ್ ಹಾಕಲಾಗಿದೆ.