ಆಯುರ್ವೇದ ಸ್ನಾತಕೋತ್ತರ ಪದದವೀಧರರು ಸರ್ಜರಿ ಮಾಡಲು ಅನುಮತಿ ಕೋರುವುದನ್ನು ವಿರೋಧಿಸಿ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿರುವ ಅರ್ಜಿಯನ್ನು ಆಲಿಸಿರುವ ಸುಪ್ರೀಂ ಕೋರ್ಟ್ ಈ ಸಂಬಂಧ ಕೇಂದ್ರ ಸರ್ಕಾರದ ಪ್ರತಿಕ್ರಿಯೆ ಕೋರಿದೆ.
ಮುಖ್ಯ ನ್ಯಾಯಾಧೀಶರಾದ ಶರದ್ ಅರವಿಂದ್ ಬೋಬ್ಡೆ ಹಾಗೂ ನ್ಯಾಯಾಧೀಶರಾದ ಎ.ಎಸ್. ಬೋಪಣ್ಣ ಮತ್ತು ವಿ. ರಾಮಸುಬ್ರಮಣಿಯನ್ ಈ ಸಂಬಂಧ ಕೇಂದ್ರ ಹಾಗೂ ಭಾರತೀಯ ಔಷಧ ಕೇಂದ್ರ ಸಮಿತಿಗೆ ನೊಟೀಸ್ ಜಾರಿ ಮಾಡಿದ್ದು ನಾಲ್ಕು ವಾರಗಳ ಒಳಗೆ ಪ್ರತಿಕ್ರಿಯೆ ಬೇಕೆಂದು ತಿಳಿಸಿದೆ.
ಕೇಂದ್ರದ ಪರವಾಗಿ ವಕಾಲತ್ತು ವಹಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಇದೊಂದು ಗಂಭೀರ ಕಳಕಳಿಯಾಗಿದೆ ಎಂದಿದ್ದಾರೆ. ಮೇಲ್ಕಂಡ ಅರ್ಜಿಗೆ ತೀವ್ರ ವಿರೋಧ ವ್ಯಕ್ತಪಡಿಸಿರುವ ಆಯುರ್ವೇದ ವೈದ್ಯಕೀಯ ಸಂಘವು, ಈ ನಡೆಯು ಆಯುರ್ವೇದ ವೈದ್ಯರಿಗೆ ಅವಮಾನ ಮಾಡಿದಂತೆ ಎಂದಿದೆ.
ಭಾರತೀಯ ವೈದ್ಯಕೀಯ ಸಮಿತಿ ಕಾಯಿದೆ 1956ರ ಅಡಿ ’ಸರ್ಜರಿ’ ಪದವನ್ನು ’ಮೆಡಿಸಿನ್’ನ ವಿಶ್ಲೇಷಣೆ ಅಡಿ ಸೇರಿಸಲಾಗಿದ್ದು, ಈಗ 2019ರ ಕಾಯಿದೆ ಅಡಿ ಇದನ್ನು ತೆಗೆದು ಹಾಕಲಾಗಿದೆ. ಭಾರತೀಯ ವೈದ್ಯಕೀಯ ಪದ್ಧತಿಯಲ್ಲಿ ಸರ್ಜರಿ ಯಾವತ್ತಿಗೂ ಇರಲಿಲ್ಲ ಎಂದು ಅರ್ಜಿದಾರ ಸಂಸ್ಥೆ ಹೇಳಿಕೊಂಡಿದೆ.
ಭಾರತೀಯ ಔಷಧಿ ಕೇಂದ್ರ ಸಮಿತಿ (ಸ್ನಾತಕೋತ್ತರ ಆಯುರ್ವೇದ ಶಿಕ್ಷಣ) ನಿಯಮಗಳು 2016ರ ಸಿಂಧುತ್ವ ಪ್ರಶ್ನಿಸಿದ ಅರ್ಜಿದಾರರು, 2020ರಲ್ಲಿ ಈ ಸಂಬಂಧ ಮಾಡಲಾದ ತಿದ್ದುಪಡಿಯನ್ನು ಸಹ ಪ್ರಶ್ನಿಸಿದ್ದಾರೆ.