ಕೊರೋನಾ ಸಾಂಕ್ರಾಮಿಕ ಕಾರಣಕ್ಕಾಗಿ ನ್ಯಾಯಾಲಯಗಳು ಆನ್‌ಲೈನ್‌ನಲ್ಲಿ ವಿಚಾರಣೆ ನಡೆಸುತ್ತಿವೆ. ಈ ವೇಳೆ ವಕೀಲರು ಶಿಸ್ತುಬದ್ಧವಾಗಿ ವಿಚಾರಣೆಯಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂಬ ಮಾತುಗಳು ಕೇಳಿಬಂದಿವೆ.
ಆಘಾತಕಾರಿ ಘಟನೆಯೊಂದರಲ್ಲಿ ಸುಪ್ರಿಂ ಕೋರ್ಟ್ ವಕೀಲರೊಬ್ಬರು ಕೆಲ ಸೆಕೆಂಡುಗಳ ಕಾಲ ಶರ್ಟ್ ಧರಿಸದ ಸ್ಥಿತಿಯಲ್ಲಿ ಆನ್‌ಲೈನ್‌ನಲ್ಲಿ ಕಾಣಿಸಿಕೊಂಡು ತಕ್ಷಣವೇ ಅರಿತುಕೊಂಡು ಲಾಗ್ ಔಟ್ ಆಗಿದ್ದಾರೆ. ಸುದರ್ಶನ್ ಟಿವಿಯ ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಆನ್‌ಲೈನ್ ಮೂಲಕ ವಿಚಾರಣೆ ನಡೆಯುತ್ತಿದ್ದಾಗ ಈ ಪ್ರಸಂಗ ನಡೆದಿದೆ.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ವರ್ಚುಯಲ್ ವಿಚಾರಣೆ ಆರಂಭಿಸುತ್ತಿದ್ದಂತೆ ವಕೀಲರು ಆಕಸ್ಮಿಕವಾಗಿ ಶರ್ಟ್ ಲೆಸ್ ಆಗಿ ಕಾಣಿಸಿಕೊಂಡಿದ್ದು ಕಸಿವಿಸಿಗೊಂಡ ನ್ಯಾಯಾಧೀಶರು ಯಾವ ವಕೀಲರು ಎಂದು ಈ ವೇಳೆ ಪ್ರಶ್ನೆ ಮಾಡಿದ್ದಾರೆ. ಜತೆಗೆ ವಕೀಲರ ವರ್ತನೆಯ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ವರ್ಚುಯಲ್ ಮೀಟಿಂಗ್ ನಲ್ಲಿ ಡೆಕೋರಮ್ ಅನುಸರಿಸಲಾಗುತ್ತಿದೆಯೇ ಎಂಬ ಬಗ್ಗೆ ಸಾಲಿಸಿಟರ್ ಜನರಲ್ ಅವರಿಂದ ಮಾಹಿತಿ ಬಯಸಿದ್ದಾರೆ.
ಈ ರೀತಿಯ ಘಟನೆ ಇದೇ ಮೊದಲಲ್ಲ, ಸೆಪ್ಟೆಂಬರ್ ನಲ್ಲಿ ವಿಚಾರಣೆ ನಡೆಸುವ ವೇಳೆ ವಕೀಲರೊಬ್ಬರು ಧೂಮಪಾನ ಮಾಡುತ್ತಿರುವುದನ್ನು ನ್ಯಾಯಾಧೀಶರು ಗಮನಿಸಿದ್ದರು.