ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್ ಆಗಿರುವ ಭಾರತೀಯ ಸ್ಟೇಟ್ ಬ್ಯಾಂಕ್ ಎಟಿಎಂ ವಹಿವಾಟು ಮತ್ತು ನಿಯಮಗಳನ್ನು ಬದಲಿಸಿದೆ.
ಏಪ್ರಿಲ್ ನಲ್ಲಿ ಎಸ್ಬಿಐ ಎಟಿಎಂ ವಹಿವಾಟುಗಳಿಗೆ ಶುಲ್ಕ ಮನ್ನಾ ಮಾಡಲಾಗಿತ್ತು. ಜುಲೈ 1ರಿಂದ ಜಾರಿಗೆ ಬರುವಂತೆ ನಿಯಮಗಳನ್ನು ಬದಲಿಸಲಾಗಿದೆ. ಉಳಿತಾಯ ಖಾತೆಯಲ್ಲಿ 25,000 ರೂ. ಸರಾಸರಿ ಮಾಸಿಕ ಬ್ಯಾಲೆನ್ಸ್ ಹೊಂದಿರುವ ಖಾತೆದಾರರು 8 ಉಚಿತ ವಹಿವಾಟುಗಳನ್ನು ಪಡೆಯಲಿದ್ದಾರೆ.
ಇದರಲ್ಲಿ ಎಸ್ಬಿಐ ಎಟಿಎಂಗಳಲ್ಲಿ 5 ಸಲ ಮತ್ತು ಮೆಟ್ರೋ ಕೇಂದ್ರಗಳಲ್ಲಿ 3 ವ್ಯವಹಾರ ಒಳಗೊಂಡಿದೆ. ಮಹಾನಗರಗಳಲ್ಲಿನ ಖಾತೆದಾರರಿಗೆ ಎಸ್ಬಿಐ ಎಟಿಎಂ ಗಳಲ್ಲಿ 5 ಸಲ ಉಚಿತ ವಹಿವಾಟು ಅವಕಾಶ ನೀಡಲಾಗಿದೆ.
ಎಸ್ಬಿಐ ಗ್ರಾಹಕರಿಗೆ ಉಳಿತಾಯ ಖಾತೆಯಲ್ಲಿ 25 ಸಾವಿರಕ್ಕಿಂತ ಹೆಚ್ಚಿನ ಮೊತ್ತ ಇದ್ದರೆ ಅನಿಯಮಿತ ವಹಿವಾಟು ನಡೆಸಬಹುದು. 50 ಸಾವಿರ ಮತ್ತು 1 ಲಕ್ಷವರೆಗಿನ ಬ್ಯಾಲೆನ್ಸ್ ಕಾಯ್ದುಕೊಳ್ಳುವ ಗ್ರಾಹಕರಿಗೆ 8 ಉಚಿತ ವಹಿವಾಟು ಇರುತ್ತದೆ. 1 ಲಕ್ಷಕ್ಕಿಂತ ಹೆಚ್ಚಿನ ಮೊತ್ತ ಹೊಂದಿದ ಖಾತೆದಾರರಿಗೆ ಅನಿಯಮಿತವಾದ ವಹಿವಾಟು ನಡೆಸಲು ಅವಕಾಶವಿದೆ.
ಯಾವುದೇ ಹೆಚ್ಚುವರಿ ಹಣಕಾಸು ವಹಿವಾಟುಗಳಿಗೆ ಸರಕು ಮತ್ತು ಸೇವಾ ತೆರಿಗೆ ಸೇರಿ 10 ರಿಂದ 20 ರೂ. ವರೆಗೂ ಶುಲ್ಕ ವಿಧಿಸಲಾಗುವುದು. ನಿಗದಿತ ಮಿತಿಯನ್ನು ಮೀರಿದ ಯಾವುದೇ ಹೆಚ್ಚುವರಿ ಹಣಕಾಸು ಎಟಿಎಂ ವ್ಯವಹಾರಗಳಿಗೆ ಜಿಎಸ್ಟಿ ಜೊತೆಗೆ 5 ರಿಂದ 8 ರೂಪಾಯಿ ಶುಲ್ಕ ವಿಧಿಸಲಾಗುವುದು. ಬ್ಯಾಲೆನ್ಸ್ ಕಾಯ್ದುಕೊಳ್ಳದ ಕಾರಣಕ್ಕೆ 20 ರೂ. ಶುಲ್ಕ ಮತ್ತು ಜಿಎಸ್ಟಿ ವಿಧಿಸಲಾಗುವುದು. ಗ್ರಾಹಕರಿಗೆ ಎಸ್ಬಿಐ ಎಟಿಎಂಗಳಲ್ಲಿ 6 ಮೆಟ್ರೋ ಕೇಂದ್ರಗಳಲ್ಲಿ 8 ಗರಿಷ್ಠ ಉಚಿತ ಡೆಬಿಟ್ ವಹಿವಾಟು, ಶಾಖೆ ಇಲ್ಲದಿದ್ದರೆ ಇತರೆ ಎಟಿಎಂಗಳಲ್ಲಿ ಗರಿಷ್ಠ 12 ವಹಿವಾಟು ಉಚಿತವಾಗಿ ನಡೆಸಲು ಅನುಮತಿ ಇದೆ. ಎಲ್ಲಾ ವೇತನ ಖಾತೆಗಳಿಗೆ ಉಚಿತ ಅನಿಯಮಿತ ವಹಿವಾಟು ಅವಕಾಶ ಇದೆ ಎಂದು ಹೇಳಲಾಗಿದೆ.