ಸಮಾಧಿಯೊಂದರಲ್ಲಿ 300 ರೂ.ಗಳನ್ನು ಕದ್ದರು ಎಂಬ ಆಪಾದನೆ ಮೇಲೆ 11-13 ವರ್ಷ ವಯಸ್ಸಿನ ನಾಲ್ವರು ಹುಡುಗರ ಕೈಗಳನ್ನು ಬೆನ್ನಿಗೆ ಕಟ್ಟಿ, ಅವರನ್ನು ಬಿಸಿಲಿನಲ್ಲಿ 4ಕಿಮೀ ನಡೆಯುವ ಹಾಗೆ ಮಾಡಿದ ಘಟನೆ ಪಂಜಾಬ್ನ ಸಂಗ್ರೂರ್ ಜಿಲ್ಲೆಯ ಧುರಿ ಉಪ-ವಿಭಾಗದ ಬನ್ಭೋರಿ ಎಂಬ ಗ್ರಾಮದಲ್ಲಿ ಜರುಗಿದೆ.
ಊರಿನ ಸರ್ಪಂಚರು ಹಾಗೂ ಪಂಚಾಯಿತಿ ಸದಸ್ಯರು ಹುಡುಗರಿಗೆ ಶಿಕ್ಷೆ ಕೊಟ್ಟಿದ್ದು, ಅವರ ಕುಟುಂಬಗಳಿಗೆ ತಲಾ ಐದು ಸಾವಿರ ರೂ.ಗಳ ದಂಡ ವಿಧಿಸಲಾಗಿದೆ.
ಮಾರ್ಚ್ 7ರಂದು ಈ ಘಟನೆ ನಡೆದಿದ್ದು, ಹುಡುಗರ ಕುಟುಂಬಸ್ಥರು ಸಂಗ್ರೂರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ದೂರು ಕೊಟ್ಟ ಬಳಿಕ ಬೆಳಕಿಗೆ ಬಂದಿದ್ದು, ಮಕ್ಕಳ ಹಕ್ಕುಗಳ ರಾಜ್ಯ ಆಯೋಗಕ್ಕೂ ಸಹ ದೂರು ಸಲ್ಲಿಸಲಾಗಿದೆ.
ಸೋಲಾರ್ ಬ್ಯಾಟರಿ ಚಾಲಿತ ವಾಹನ ಅನ್ವೇಷಿಸಿದ ರೈತ
ಸಮಾಧಿಯ ಬಳಿ ಇಟ್ಟಿದ್ದ ದುಡ್ಡು ತೆಗೆದುಕೊಂಡ ಹುಡುಗರನ್ನು ಹಿಡಿದ ಗ್ರಾಮಸ್ಥರು ಅವರನ್ನು ಸರ್ಪಂಚ್ ಹಾಗೂ ಗ್ರಾಮ ಸಭಾ ಸದಸ್ಯರ ಮುಂದೆ ನ್ಯಾಯಕ್ಕೆ ನಿಲ್ಲಿಸಿದ್ದಾರೆ. ಆ ವೇಳೆ ಇವರಿಗೆ ಕಠಿಣ ಶಿಕ್ಷೆ ವಿಧಿಸಲಾಗಿದೆ.
ಹುಡುಗರೆಲ್ಲಾ ದಲಿತರ ಕುಟುಂಬಗಳಿಗೆ ಸೇರಿದವರು ಎನ್ನಲಾಗಿದೆ. “ಸಿಕ್ಕಾಪಟ್ಟೆ ದೈಹಿಕ ಶಿಕ್ಷೆ ಕೊಟ್ಟ ಕಾರಣ ಇವರಲ್ಲಿ ಒಬ್ಬನ ಮಣಿಕಟ್ಟು ಮುರಿದಿದೆ. ಈ ಸಂಬಂಧ ಪೊಲೀಸರಿಗೆ ಹಾಗೂ ಮಕ್ಕಳ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿದ್ದೇನೆ. ಆಪಾದಿತರಿಗೆ ಶಿಕ್ಷೆಯಾಗಿ ನಮಗೆ ನ್ಯಾಯ ಸಿಗಬೇಕಿದೆ,” ಎಂದು ಆ ಹುಡುಗರಲ್ಲಿ ಒಬ್ಬನ ತಂದೆಯೊಬ್ಬರು ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಸರ್ಪಂಚ್ ಗುರ್ನಾಮ್ ಸಿಂಗ್, “ಹುಡುಗರು ಬಹಳ ದಿನಗಳಿಂದ ಕಳ್ಳತನದಲ್ಲಿ ಭಾಗಿಯಾಗಿದ್ದರು. ನಮ್ಮ ವೈರಿಗಳು ಈ ವಿಚಾರವನ್ನು ದೊಡ್ಡದು ಮಾಡುತ್ತಿದ್ದಾರೆ. ನಾವು ಬಾನ್ಭೋರಿ ಗ್ರಾಮ ತಲುಪುವ ವೇಳೆಗೆ ಅವರ ಕೈಗಳನ್ನು ಕಟ್ಟಿಹಾಕಲಾಗಿತ್ತು. ಅವರಿಗೆ ಪಾಠ ಕಲಿಸಲೆಂದು ಹೀಗೆ ನಡೆಯಲು ಹೇಳಿ ಅವರಿಗೆ ದಂಡ ವಿಧಿಸಲು ಮುಂದಾದೆವು. ನಾವು ಯಾರ ಮೇಲೂ ಹಲ್ಲೆ ಮಾಡಿಲ್ಲ,” ಎಂದು ಹೇಳಿದ್ದಾರೆ.