ರಾಜ್ಯಸಭೆಯಲ್ಲಿ ಪ್ರಾದೇಶಿಕ ಭಾಷೆಗಳ ಬಳಕೆ ಹಿಂದಿಗಿಂತಲೂ ಹೆಚ್ಚಿದ್ದು, 2018-2020ರ ಅವಧಿಯಲ್ಲಿ ಸಂಸದರು 10 ವಿವಿಧ ಭಾಷೆಗಳಲ್ಲಿ ಮಾತನಾಡಿದ್ದಾರೆ ಎಂದು ತಿಳಿದು ಬಂದಿದೆ.
ಸಂವಿಧಾನದಲ್ಲಿ ಅಧಿಕೃತವಾಗಿ ಮಾನ್ಯ ಮಾಡಲಾದ 22 ಭಾಷೆಗಳ ಪೈಕಿ 10 ಭಾಷೆಗಳು ರಾಜ್ಯಸಭೆಯ ಪ್ರಾಂಗಣದಲ್ಲಿ ಕಳೆದ ಎರಡು ವರ್ಷಗಳಲ್ಲಿ ಮಾರ್ಧನಿಸಿವೆ.
2019-20ರ ದಾಖಲೆಗಳ ಪ್ರಕಾರ — ಹಿಂದಿ, ತೆಲುಗು, ಉರ್ದು ಹಾಗೂ ತಮಿಳು ಭಾಷೆಗಳು ರಾಜ್ಯಸಭೆಯಲ್ಲಿ ಅತ್ಯಂತ ಹೆಚ್ಚು ಬಳಸಲ್ಪಟ್ಟ ಭಾಷೆಗಳಾಗಿದ್ದು, ಇವುಗಳ ನಂತರ ಸ್ಥಾನದಲ್ಲಿ ಸಂಸ್ಕೃತ ಇದೆ.
2018-2020ರ ಅವಧಿಯಲ್ಲಿ ಒಟ್ಟಾರೆ 163 ಸಭೆಗಳು ನಡೆದಿದ್ದು, 135 ನಿದರ್ಶನಗಳಲ್ಲಿ ಪ್ರಾದೇಶಿಕ ಭಾಷೆ ಬಳಕೆಯಾಗಿದೆ. ಈ ವೇಳೆ ಸಂಭವಿಸಿದ ಚರ್ಚೆಗಳ ಅವಧಿಯಲ್ಲಿ ಒಟ್ಟಾರೆ 66 ಬಾರಿ ತರ್ಜುಮೆ ಮಾಡಲಾಗಿದೆ.
ಇದೇ ಅವಧಿಯಲ್ಲಿ ಐದು ಬಾರಿ ಕನ್ನಡದ ಕಂಪನ್ನು ಮೇಲ್ಮನೆಯಲ್ಲಿ ಪಸರಿಸಲಾಗಿದೆ.
1952ರಿಂದ ಇದೇ ಮೊದಲ ಬಾರಿಗೆ ಡೋಗ್ರಿ, ಕಾಶ್ಮೀರಿ, ಕೊಂಕಣಿ ಹಾಗೂ ಸಂತಾಲಿ ಭಾಷೆಗಳನ್ನು ಬಳಸಲಾಗಿದೆ. ಈ ನಾಲ್ಕು ಭಾಷೆಗಳ ಜೊತೆಗೆ ಸಿಂಧಿ ಭಾಷೆಯನ್ನು ಸಂಸತ್ತಿನ ಪ್ರಾಂಗಣದಲ್ಲಿ ಬಳಸಲು ಬೇಕಾದ ಅಗತ್ಯ ವ್ಯವಸ್ಥೆಗಳನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಒದಗಿಸಿದ್ದಾರೆ.