ನವದೆಹಲಿ: ವಿಶ್ವದ ಮೊದಲ ಕೊರೊನಾ ತಡೆ ಲಸಿಕೆಯನ್ನು ರಷ್ಯಾ ಅಭಿವೃದ್ಧಿಪಡಿಸಿದ್ದು, ಕೊರೊನಾ ಸೋಂಕು ತಗುಲಿದ ರೋಗಿಗಳಿಗೆ ಚಿಕಿತ್ಸೆ ನೀಡಲು ರಷ್ಯಾ ಅಭಿವೃದ್ಧಿಪಡಿಸಿದ ಲಸಿಕೆಯ ಪರಿಣಾಮಕಾರಿ ಮತ್ತು ಸುರಕ್ಷತೆಯ ಬಗ್ಗೆ ಭಾರತದ ಪ್ರಮುಖ ಸಂಶೋಧನಾ ಸಂಸ್ಥೆ ಸಿಸಿಎಂಬಿ ಅನುಮಾನ ವ್ಯಕ್ತಪಡಿಸಿದೆ.
ಸೆಂಟರ್ ಫಾರ್ ಸೆಲ್ಯೂಲರ್ ಮತ್ತು ಮಾಲಿಕ್ಯುಲರ್ ಬಯಾಲಜಿ(ಸಿಸಿಎಂಬಿ) ಉನ್ನತ ಅಧಿಕಾರಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ, ಕೊರೊನಾ ವೈರಸ್ ವಿರುದ್ಧ ರಷ್ಯಾ ಅಭಿವೃದ್ಧಿಪಡಿಸಿದ ಲಸಿಕೆಯ ಪರಿಣಾಮ ಮತ್ತು ಸುರಕ್ಷತೆಯ ಬಗ್ಗೆ ತಿಳಿದಿಲ್ಲವೆಂದು ಹೇಳಿದ್ದಾರೆ.
ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್, ಕೊರೊನಾ ವಿರುದ್ಧ ವಿಶ್ವದ ಮೊದಲ ಲಸಿಕೆಯನ್ನು ನಮ್ಮ ದೇಶ ಅಭಿವೃದ್ಧಿಪಡಿಸಿದೆ ಎಂದು ಹೇಳಿದ ನಂತರ ಸಿಸಿಎಂಬಿ ನಿರ್ದೇಶಕ ರಾಕೇಶ್ ಕೆ. ಮಿಶ್ರಾ ಪ್ರತಿಕ್ರಿಯೆ ನೀಡಿದ್ದು, ಜನ ಅದೃಷ್ಟವಂತರಾಗಿದ್ದರೆ ರಷ್ಯಾದ ಲಸಿಕೆ ಕೆಲಸ ಮಾಡುತ್ತದೆ ಎಂದು ಹೇಳಿದ್ದಾರೆ.
ಲಸಿಕೆಯ ಪರಿಣಾಮ ಮತ್ತು ಸುರಕ್ಷತೆಯ ಬಗ್ಗೆ ಇನ್ನು ತಿಳಿದಿಲ್ಲ. ಸರಿಯಾದ ಪ್ರಯೋಗಗಳನ್ನು ನಡೆಸಿಲ್ಲ. ಮೂರು ಹಂತದ ಪ್ರಯೋಗಗಳ ನಂತರ ಪರಿಣಾಮದ ಬಗ್ಗೆ ತಿಳಿದುಕೊಂಡಾಗ ಮತ್ತು ಹೆಚ್ಚಿನ ಸಂಖ್ಯೆಯ ಜನರ ಮೇಲೆ ಪರೀಕ್ಷಿಸಿದಾಗ ಮಾಹಿತಿ ಗೊತ್ತಾಗುತ್ತದೆ. ಎರಡು ತಿಂಗಳು ಕಾಯಬೇಕು. ರಷ್ಯಾ ಲಸಿಕೆ ಅಭಿವೃದ್ಧಿಪಡಿಸುವಾಗ ದೊಡ್ಡ ಪ್ರಮಾಣದ ಪರೀಕ್ಷೆಗಳನ್ನು ನಡೆಸಿದಂತೆ ಕಾಣುತ್ತಿಲ್ಲ. ಒಂದು ವೇಳೆ ಅವರು ಪರೀಕ್ಷೆ ಪ್ರಯೋಗಗಳನ್ನು ನಡೆಸಿದ್ದರೆ ಡೇಟಾವನ್ನು ಬಹಿರಂಗಪಡಿಸಲಿ. ಅದನ್ನು ಗೌಪ್ಯವಾಗಿಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.
ಲಸಿಕೆ ಜನರಿಗೆ ತಲುಪುವ ಮೊದಲು ಎಚ್ಚರಿಕೆಯಿಂದ ಮೌಲ್ಯಮಾಪನ ಮಾಡಬೇಕಿದೆ. ಯಾವುದೇ ದೇಶದ ಅಥವಾ ಕಂಪನಿಯ ಲಸಿಕೆಗೆ ಸಂಬಂಧಿಸಿದಂತೆ ಡೇಟಾವನ್ನು ಬಿಡುಗಡೆ ಮಾಡಬೇಕು. ರಷ್ಯಾದ ಲಸಿಕೆ ಸುರಕ್ಷಿತ ಅಲ್ಲ. ಸಾಮಾನ್ಯವಾಗಿ ಯಾವುದೇ ದೇಶದಲ್ಲಿ ಮೂರು ಹಂತದ ಪ್ರಯೋಗಗಳ ನಂತರ ಬಳಕೆಗೆ ಅನುಮತಿಸಬಹುದು ಎಂದು ಹೇಳಿದ್ದಾರೆ.
ಮೊದಲ ಮತ್ತು 2ನೇ ಹಂತದ ಪರೀಕ್ಷೆ ಪ್ರಯೋಗದ ಫಲಿತಾಂಶ ಉತ್ತೇಜನಕಾರಿಯಾಗಿ ಇದ್ದರೆ ನನಗೆ ಏನೂ ಆಶ್ಚರ್ಯವಾಗುವುದಿಲ್ಲ. ನಿಜವಾದ ಪರೀಕ್ಷೆ ಹಂತ ಮೂರರಲ್ಲಿ ಇರುತ್ತದೆ ಎಂದು ಅವರು ತಿಳಿಸಿದ್ದಾರೆ.
ಇನ್ನು ರಷ್ಯಾ, ರಕ್ಷಣಾ ಸಚಿವಾಲಯದ ಗಮಾಲೆಯ ನ್ಯಾಷನಲ್ ರಿಸರ್ಚ್ ಸೆಂಟರ್ ಫಾರ್ ಎಪಿಡೆಮಿಯಾಲಜಿ ಅಂಡ್ ಮೈಕ್ರೋಬಯಾಲಜಿ ಅಭಿವೃದ್ಧಿಪಡಿಸಿದ ಸ್ಪುಟ್ನಿಕ್ ಕೊರೊನಾ ಮೊದಲ ಲಸಿಕೆಯನ್ನು ವ್ಲಾಡಿಮರ್ ಪುಟಿನ್ ಅವರ ಮಗಳಿಗೆ ನೀಡಲಾಗಿದ್ದು, ಆಕೆ ಆರೋಗ್ಯವಾಗಿದ್ದಾರೆ ಎಂದು ಹೇಳಲಾಗಿದೆ.
ರಷ್ಯಾದ ಲಸಿಕೆ ಸುರಕ್ಷತೆ ಬಗ್ಗೆ ಶಂಕೆ ವ್ಯಕ್ತಪಡಿಸಿದ್ದ ಸಿಸಿಎಂಬಿ, ಲಸಿಕೆ ಸುರಕ್ಷತೆ, ಪರಿಣಾಮಗಳ ಬಗ್ಗೆ ಅಧ್ಯಯನ ನಡೆಯಬೇಕು. ಸಂಪೂರ್ಣ ಅಧ್ಯಯನ ನಡೆಸಿದ ಬಳಿಕ ಲಸಿಕೆ ಬಳಕೆ ಮಾಡಲು ಸಾಧ್ಯ ಎಂದು ಹೇಳಿದೆ.