ನವದೆಹಲಿ: ಕೇಂದ್ರ ಸರ್ಕಾರಿ ನೌಕರರಿಗೆ ಹಬ್ಬದ ಉಡುಗೊರೆಯಾಗಿ ವೇತನ, ಭತ್ಯೆ ಹೆಚ್ಚಳ ಮಾಡಲು ಸರ್ಕಾರ ಮುಂದಾಗಿದ್ದು ಹಬ್ಬದ ಹೊತ್ತಲ್ಲೇ ಮತ್ತೊಂದು ಸಿಹಿ ಸುದ್ದಿ ನೀಡುವ ಸಾಧ್ಯತೆ ಇದೆ.
ಕೇಂದ್ರ ಸರ್ಕಾರದ ಉದ್ಯೋಗಿಗಳ ವೇತನ, ತುಟ್ಟಿ ಭತ್ಯೆ ಹೆಚ್ಚಳ ಮಾಡಲಾಗುವುದು. ಇದರಿಂದ 45 ಲಕ್ಷ ನೌಕರರು, ನಿವೃತ್ತ ನೌಕರರಿಗೆ ಅನುಕೂಲವಾಗುತ್ತದೆ. ಗ್ರಾಹಕರ ಸೂಚ್ಯಂಕದ ಆಧಾರದ ಮೇಲೆ ಡಿಎ ಹೆಚ್ಚಳವಾಗುತ್ತದೆ. ಅಂತೆಯೇ ಕೇಂದ್ರ ಸರ್ಕಾರಿ ನೌಕರರಿಗೆ ವೇತನ ಮತ್ತು ಡಿಎ ಹೆಚ್ಚಳ ಮಾಡುವ ಮೂಲಕ ಉದ್ಯೋಗಿಗಳ ಖರ್ಚಿನ ಶಕ್ತಿಯನ್ನು ವೃದ್ಧಿಸಲು ಯೋಜಿಸಲಾಗಿದೆ. ಇದರಿಂದ ವ್ಯಾಪಾರೋದ್ಯಮಕ್ಕೆ ಅನುಕೂಲವಾಗುತ್ತದೆ. ಮಾರುಕಟ್ಟೆಗೆ ಹಣದ ಹರಿವು ಉಂಟಾಗಿ ಆರ್ಥಿಕತೆಗೆ ಉತ್ತೇಜನ ಸಿಗಬಹುದು. ಸರ್ಕಾರಕ್ಕೆ ತೆರಿಗೆ ಸಂದಾಯವಾಗುತ್ತದೆ ಎಂದು ಅಂದಾಜಿಸಲಾಗಿದೆ.
ಕೊರೋನಾದಿಂದಾಗಿ ಆರ್ಥಿಕ ಸಂಕಷ್ಟ ಉಂಟಾಗಿ ಸಣ್ಣ ವ್ಯಾಪಾರದಿಂದ ಹಿಡಿದು ಉದ್ಯಮ, ಕೈಗಾರಿಕೆಗಳ ವಲಯದಲ್ಲಿಯೂ ಆರ್ಥಿಕತೆಗೆ ಪೆಟ್ಟು ಬಿದ್ದಿದೆ. ಹಣದ ಹರಿವು ಹೆಚ್ಚಿಸಲು ಜೊತೆಗೆ ಆರ್ಥಿಕತೆಗೆ ಉತ್ತೇಜನ ನೀಡಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳುತ್ತಿದೆ. ಸರ್ಕಾರಿ ನೌಕರರ ವೇತನ ಹೆಚ್ಚಳಕ್ಕೆ ಚಿಂತನೆ ನಡೆಸಲಾಗಿದೆ. ಈ ಮೂಲಕ ಹಣದ ಹರಿವು ಉಂಟಾಗಿ ಆರ್ಥಿಕತೆಗೆ ಚೈತನ್ಯ ಸಿಗಬಹುದೆಂದು ಯೋಜಿಸಲಾಗಿದೆ.