ನವದೆಹಲಿ:ಅಂತಾರಾಷ್ಟ್ರೀಯ ಮಾನವ ಹಕ್ಕು ಸಂಘಟನೆ ಅಮ್ನೆಸ್ಟಿ ಇಂಟರ್ ನ್ಯಾಶನಲ್ ಭಾರತದಲ್ಲಿ ತನ್ನ ಕಾರ್ಯ ಸ್ಥಗಿತ ಮಾಡುವುದಾಗಿ ಮಂಗಳವಾರ ಘೋಷಿಸಿದೆ. ಭಾರತ ಸರ್ಕಾರದಿಂದ ನಿರಂತರ ಗದಾ ಪ್ರಹಾರಕ್ಕೆ ಒಳಗಾಗಿದ್ದಾಗಿ ಸಂಸ್ಥೆ ದೂರಿದೆ.
ನವದೆಹಲಿಯಲ್ಲಿ ಫೆಬ್ರವರಿಯಲ್ಲಿ ಸಿಎಎ ಗಲಭೆ ಹೆಚ್ಚಲು ದೆಹಲಿ ಪೊಲೀಸರು ಕಾರಣ ಎಂದು ಅಮ್ನೆಸ್ಟಿ ದೂರಿತ್ತು. ಕೊರೊನಾಕ್ಕೆ ವಿಶ್ವದಲ್ಲೇ ಅತೀ ಹೆಚ್ಚು ವೈದ್ಯಕೀಯ ಸಿಬ್ಬಂದಿ ಭಾರತದಲ್ಲಿ ಬಲಿಯಾಗಿದ್ದಾರೆ ಎಂದು ಅಮ್ನೆಸ್ಟಿ ಎತ್ತಿ ತೋರಿಸಿತ್ತು. ಇದಾಗಿ ಕೆಲವೇ ತಿಂಗಳಲ್ಲಿ ಭಾರತ ಸರ್ಕಾರ ಅಮ್ನೆಸ್ಟಿಯ ಎಲ್ಲ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡಿದೆ. ಇದರಿಂದ ದೇಶದಲ್ಲಿ ತನ್ನ ಸಂಶೋಧನಾ ಕಾರ್ಯವನ್ನು ಅಮ್ನೆಸ್ಟಿ ಸ್ಥಗಿತ ಮಾಡಿದ್ದು, ನೌಕರರನ್ನು ಮನೆಗೆ ಕಳಿಸಿದೆ.
ನಮ್ಮ ಸಂಸ್ಥೆಯ ಮೇಲೆ ಸರ್ಕಾರ ದ್ವೇಷ ಸಾಧಿಸುತ್ತಿರುವುದು ಇದೇ ಮೊದಲಲ್ಲ. ಕಳೆದ ಎರಡು ವರ್ಷಗಳಿಂದ ನಡೆದಿದೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ ಅವಿನಾಶ್ ಕುಮಾರ್ ಹೇಳಿದ್ದಾರೆ.
ನಿಯಮ ಬಾಹಿರವಾಗಿ ವಿದೇಶಿ ಹಣ ಪಡೆಯುತ್ತಿರುವ ಆರೋಪದ ಮೇಲೆ ಅಮ್ನೆಸ್ಟಿ ಇಂಡಿಯಾ ಕಚೇರಿ ಹಾಗೂ ನಿರ್ದೇಶಕರ ಮನೆ ಮೇಲೆ 2018 ರ ಅಕ್ಟೋಬರ್ ನಲ್ಲಿ ಜಾರಿ ನಿರ್ದೇಶನಾಲಯ ದಾಳಿ ಮಾಡಿತ್ತು. ಅಮ್ನೆಸ್ಟಿ ಬಂದಾಗಿರುವುದು ಭಾರತದಲ್ಲಿ ಮಾತ್ರವಲ್ಲ. ಇಸ್ರೇಲ್, ರಷ್ಯಾ, ಚೀನಾದಲ್ಲಿ ಸಂಸ್ಥೆ ಈಗಾಗಲೇ ಕೆಲಸ ಸ್ಥಗಿತ ಮಾಡಿದೆ.