
ಮುಂಬೈ: ಮಹಾರಾಷ್ಟ್ರದ ವಿಧರ್ಭ ಪ್ರಾಂತ್ಯದ ಅಮರಾವತಿ ನಗರದಲ್ಲಿ ನಡೆದ ಆಘಾತಕಾರಿ ಘಟನೆಯಲ್ಲಿ ಸರ್ಕಾರಿ ಆಸ್ಪತ್ರೆಯ ಲ್ಯಾಬ್ ತಂತ್ರಜ್ಞನೊಬ್ಬ ಕೋವಿಡ್ ಪರೀಕ್ಷೆಗೆ ಬಂದಿದ್ದ ಮಹಿಳೆಯರ ಗುಪ್ತಾಂಗದಿಂದ ಸ್ವ್ಯಾಬ್ ಸಂಗ್ರಹಿಸಿದ್ದಾನೆ.
ಕಿರುಕುಳ ಮತ್ತು ಅತ್ಯಾಚಾರ ಆರೋಪದ ಮೇಲೆ ಲ್ಯಾಬ್ ಟೆಕ್ನಿಷಿಯನ್ ನನ್ನು ಬಂಧಿಸಲಾಗಿದೆ. ಕಳೆದ ಮಂಗಳವಾರ ಘಟನೆ ನಡೆದಿದೆ. ಬಡ್ನೆರಾ ಸರ್ಕಾರಿ ಆಸ್ಪತ್ರೆಯಲ್ಲಿ ಕೊರೋನಾ ಪರೀಕ್ಷೆಗೆ ಹೋಗಿದ್ದ 23 ವರ್ಷದ ಯುವತಿಯ ಬಾಯಿ ಅಥವಾ ಮೂಗಿನಿಂದ ಸ್ವ್ಯಾಬ್ ಸಂಗ್ರಹಿಸುವ ಬದಲು ಖಾಸಗಿ ಅಂಗದಿಂದ ಸ್ವ್ಯಾಬ್ ಸಂಗ್ರಹಿಸಿದ್ದಾನೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಯಶೋಮತಿ ಠಾಕೂರ್, ಈ ಕೃತ್ಯ ಎಸಗಿದ ಲ್ಯಾಬ್ ತಂತ್ರಜ್ಞನ ವಿರುದ್ಧ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ. ಪೊಲೀಸರು ಐಪಿಸಿ 354, 376ರ ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ. ಇಂತಹ ಕೃತ್ಯಗಳನ್ನು ಸಹಿಸುವುದಿಲ್ಲ ಎಂದು ಹೇಳಿದ್ದಾರೆ.
ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಸಂತ್ರಸ್ತೆ ಕೋವಿಡ್ ಇರುವ ವ್ಯಕ್ತಿಯ ಸಂಪರ್ಕಕ್ಕೆ ಬಂದಿದ್ದು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಲಾಗಿತ್ತು. ಆರೋಪಿ ಕೋವಿಡ್ ಟೆಸ್ಟ್ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದಿದೆ ಎಂದು ಹೇಳಿದ್ದು, ಎರಡನೇ ಸಲ ಪರೀಕ್ಷೆಗೆ ಒಳಗಾಗಬೇಕಾಗಿದೆ ಎಂದು ಹೇಳಿದ್ದಾನೆ. ಗಂಟಲು, ಮೂಗಿನಿಂದ ಸ್ವ್ಯಾಬ್ ಸಂಗ್ರಹಿಸುವ ಬದಲಿಗೆ ಗುಪ್ತಾಂಗದಿಂದ ಸಂಗ್ರಹಿಸಿ ಕಿರುಕುಳ ನೀಡಿದ್ದಾನೆ.
ವೈದ್ಯರಿಂದ ಈ ರೀತಿ ಸ್ವ್ಯಾಬ್ ಸಂಗ್ರಹಿಸುವುದಿಲ್ಲ ಎಂಬ ಮಾಹಿತಿ ಪಡೆದುಕೊಂಡ ಯುವತಿ, ಸಹೋದರನ ನೆರವಿನೊಂದಿಗೆ ಪೊಲೀಸರಿಗೆ ದೂರು ನೀಡಿದ್ದಾರೆ. ತಕ್ಷಣವೇ ಕ್ರಮ ಕೈಗೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಬಿಜೆಪಿ ಮುಖಂಡ ಚಿತ್ರ ವಾಘ್ ಈ ಘಟನೆಯ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದು ಮಹಾರಾಷ್ಟ್ರದಲ್ಲಿ ಆಡಳಿತ ನಡೆಸುತ್ತಿರುವ ಮಹಾ ವಿಕಾಸ್ ಆಘಾಡಿ ಸರ್ಕಾರ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.
ಸರ್ಕಾರಿ ಪ್ರಯೋಗಾಲಯದಲ್ಲಿಯೇ ಇಂತಹ ಆಘಾತಕಾರಿ ಘಟನೆ ನಡೆದಿದೆ. ಧೈರ್ಯಶಾಲಿ ಯುವತಿ ಮುಂದೆ ಬಂದು ದೂರು ನೀಡಿದ್ದಾರೆ. ಸರ್ಕಾರ ವಿಶೇಷವಾಗಿ ಮಹಿಳೆಯರಿಗೆ ಜಾಗೃತಿ ಅಭಿಯಾನ ನಡೆಸಬೇಕು. ಕೋವಿಡ್ ಪರೀಕ್ಷೆಗೆ ಗಂಟಲು ಅಥವಾ ಬಾಯಿ, ಮೂಗಿನಿಂದ ಸ್ವ್ಯಾಬ್ ಸಂಗ್ರಹಿಸಲಾಗುತ್ತದೆ ಎಂಬುದನ್ನು ತಿಳಿಸಬೇಕು ಎಂದು ಹೇಳಿದ್ದಾರೆ.
ನವಿ ಮುಂಬೈನಲ್ಲಿ ಸರ್ಕಾರಿ ಕ್ವಾರಂಟೈನ್ ಕೇಂದ್ರದಲ್ಲಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು, ಮಹಾರಾಷ್ಟ್ರದಲ್ಲಿ ಆಡಳಿತ ಸರಿಯಾಗಿಲ್ಲ ಎಂದು ದೂರಿದ್ದಾರೆ.