ತಿರುಪತಿ ದೇವಾಲಯದ ಬಳಿ ಭಿಕ್ಷೆ ಬೇಡುತ್ತಿದ್ದ ಭಿಕ್ಷುಕನ ಸಾವಿನ ಬಳಿಕ ಆತನ ಬಳಿ ಇದ್ದ ಬರೋಬ್ಬರಿ 10 ಲಕ್ಷ ರೂಪಾಯಿಗಳನ್ನ ದೇವಸ್ಥಾನದ ಆಡಳಿತ ಮಂಡಳಿ ವಶಕ್ಕೆ ಪಡೆದಿದೆ.
ತಿರುಪತಿ ತಿರುಮಲ ದೇವಸ್ಥಾನದ ವಿಜಿಲೆನ್ಸ್ ವಿಭಾಗವು ಶ್ರೀನಿವಾಸಾಚಾರಿ ನಿವಾಸದಿಂದ ಈ ಹಣವನ್ನ ಶೋಧ ಮಾಡಿದೆ. ಶ್ರೀನಿವಾಸಾಚಾರಿ ಭಿಕ್ಷೆ ಹಾಗೂಸಣ್ಣ ಪುಟ್ಟ ಉದ್ಯಮಗಳನ್ನ ಮಾಡುತ್ತಿದ್ದರು ಎನ್ನಲಾಗಿದೆ.
ತಿರುಮಲದ ಸೆಶಾಚಲಂ ಎಂಬಲ್ಲಿ ಶ್ರೀನಿವಾಸಾಚಾರಿಗೆ ಒಂದು ಮನೆಯನ್ನ ಮಂಜೂರು ಮಾಡಲಾಗಿತ್ತು. ಈ ಮನೆಯಲ್ಲಿ ಅವರು 2007ರಿಂದ ವಾಸವಿದ್ದರು ಎನ್ನಲಾಗಿದೆ. ಅಂದಿನಿಂದ ಈ ಭಿಕ್ಷುಕ ಬೇಡಿ ತಂದ ಹಣವನ್ನ ಮನೆಯಲ್ಲೇ ಅವಿತಿಡುತ್ತಿದ್ದರು ಎನ್ನಲಾಗಿದೆ.
ಅನಾರೋಗ್ಯ ಕಾರಣದಿಂದ ಶ್ರೀನಿವಾಸ ಆಚಾರಿ ಕಳೆದ ವರ್ಷ ಸಾವಿಗೀಡಾಗಿದ್ದರು. ಇವರಿಗೆ ಯಾವುದೇ ಕೌಟುಂಬಿಕ ಹಿನ್ನೆಲೆ ಇಲ್ಲದ ಕಾರಣ ಟಿಟಿಡಿ ಮನೆಯನ್ನ ಮರು ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಿತ್ತು.
ಟಿಟಿಡಿಯ ಕಂದಾಯ ಇಲಾಖೆ ಅಧಿಕಾರಿಗಳು ಮನೆಗೆ ಬಂದು ಎಲ್ಲಾ ಕಡೆ ಹುಡುಕಾಟ ನಡೆಸಿದ್ದಾರೆ. ಈ ವೇಳೆ ಅಮಾನ್ಯೀಕರಣವಾದ ಹಲವಾರು ನೋಟುಗಳನ್ನ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.
ಅಮಾನ್ಯೀಕರಣವಾದ ಹಳೆಯ 1000 ರೂಪಾಯಿಯ ನೋಟುಗಳನ್ನೂ ಸೇರಿಸಿ ಒಟ್ಟು 10 ಲಕ್ಷ ರೂಪಾಯಿಗಳನ್ನ ವಶಕ್ಕೆ ಪಡೆಯಲಾಗಿದೆ. ಟಿಟಿಡಿ ಅಧಿಕಾರಿಗಳು ಹಣವನ್ನ ಮುಟ್ಟುಗೋಲು ಹಾಕಿದ್ದು ಟಿಟಿಡಿ ಖಜಾನೆಗೆ ಜಮಾ ಮಾಡಿದ್ದಾರೆ.