ಪಾಟ್ನಾ: ಬಿಹಾರದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆ ನಡೆದಿದ್ದು ವಿರೋಧಪಕ್ಷ ಆರ್.ಜೆ.ಡಿ. ಬೆಚ್ಚಿಬಿದ್ದಿದೆ. ಆರ್.ಜೆ.ಡಿ. ಉಪಾಧ್ಯಕ್ಷ ಹಾಗೂ 6 ಮಂದಿ ಶಾಸಕರು ಪಕ್ಷ ತೊರೆದು ಆಡಳಿತ ಪಕ್ಷ ಜೆಡಿಯು ಸೇರಿದ್ದಾರೆ.
ಆರ್.ಜೆ.ಡಿ.ಗೆ ರಾಜೀನಾಮೆ ನೀಡಿದ ವಿಧಾನಪರಿಷತ್ ನ 5 ಮಂದಿ ಸದಸ್ಯರು ಆಡಳಿತಾರೂಢ ಜೆಡಿಯು ಪಕ್ಷವನ್ನು ಸೇರಿಕೊಂಡಿದ್ದಾರೆ. ರಾಧಾ ಚರಣ್ ಶೇಠ್, ರಣ್ ವಿಜಯಕುಮಾರ್ ಸಿಂಗ್, ಸಂಜಯ್ ಪ್ರಸಾದ್ ಸೇರಿದಂತೆ 5 ವಿಧಾನಪರಿಷತ್ ಸದಸ್ಯರು ಜೆಡಿಯುಗೆ ಸೇರ್ಪಡೆಯಾಗಿದ್ದಾರೆ. ವಿಧಾನ ಪರಿಷತ್ ನಲ್ಲಿ ಕೇವಲ 8 ಸದಸ್ಯರನ್ನು ಹೊಂದಿದ್ದ ಆರ್.ಜೆ.ಡಿ. 5 ಸದಸ್ಯರನ್ನು ಕಳೆದುಕೊಂಡಿದೆ. ಜೆಡಿಯು ಜೊತೆ ಐವರು ಸದಸ್ಯರು ವಿಲೀನಗೊಂಡಿರುವುದರಿಂದ ಕಾನೂನಾತ್ಮಕ ಉಚ್ಚಾಟನೆ ಕ್ರಮ ಅನ್ವಯವಾಗುವುದಿಲ್ಲ ಎಂದು ಹೇಳಲಾಗಿದೆ.
ಆರ್.ಜೆ.ಡಿ. ರಾಷ್ಟ್ರೀಯ ಉಪಾಧ್ಯಕ್ಷ ರಘುವಂಶ ಪ್ರಸಾದ್ ರಾಜೀನಾಮೆ ನೀಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಇನ್ನು 75 ಸದಸ್ಯಬಲದ ಬಿಹಾರ ವಿಧಾನ ಪರಿಷತ್ ನಲ್ಲಿ ಜಡಿಯು, ಬಿಜೆಪಿ ಮೈತ್ರಿ ಕೂಟ 39 ಸದಸ್ಯ ಬಲ ಹೊಂದಿದೆ. 29 ಸ್ಥಾನ ಖಾಲಿ ಇವೆ. ವಿರೋಧ ಪಕ್ಷಗಳ 7 ಸದಸ್ಯರು ಸದಸ್ಯರಿದ್ದಾರೆ. 12 ನಾಮನಿರ್ದೇಶಿತ ಸ್ಥಾನ, ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗುವ 9 ಸ್ಥಾನ, ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳಿಂದ 8 ಸ್ಥಾನಗಳನ್ನು ಆಯ್ಕೆ ಮಾಡಬೇಕಿದೆ.