ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸ್ವಲ್ಪ ಕಡಿಮೆಯಾಗಿದೆ. ಆದ್ರೆ ಕೆಲ ರಾಜ್ಯ ಸರ್ಕಾರ ಹಾಗೂ ವೈದ್ಯರ ಚಿಂತೆ ಹೆಚ್ಚಾಗಿದೆ. ಆ ರಾಜ್ಯಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಈ ಮಧ್ಯೆ ಮಕ್ಕಳ ಶಾಲೆ ಬಗ್ಗೆ ನಿರಂತರ ಚರ್ಚೆಯಾಗ್ತಿದೆ. ಈಗ ಏಮ್ಸ್ ನೀಡಿರುವ ವರದಿಯೊಂದು ಆತಂಕಕ್ಕೆ ಕಾರಣವಾಗಿದೆ.
ಶಾಲೆ ಆರಂಭವಾದಾಗಿನಿಂದ ಅನೇಕ ಶಾಲಾ ಶಿಕ್ಷಕರು ಹಾಗೂ ಮಕ್ಕಳಲ್ಲಿ ಕೊರೊನಾ ಕಾಣಿಸಿಕೊಂಡಿದೆ. ಏಮ್ಸ್ ಬಿಡುಗಡೆ ಮಾಡಿದ ವರದಿಯ ಪ್ರಕಾರ, ಎಲ್ಲಾ ಸಕಾರಾತ್ಮಕ ರೋಗಿಗಳಲ್ಲಿ ಶೇಕಡಾ 40ರಷ್ಟು ಮಂದಿಗೆ ರೋಗ ಲಕ್ಷಣವಿಲ್ಲ. ಈ ರೋಗಿಗಳಲ್ಲಿ ಶೇಕಡಾ 73.5 ರಷ್ಟು ಮಂದಿ 12 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಮಕ್ಕಳಿಗೆ ಕೊರೊನಾ ಲಕ್ಷಣಗಳು ಕಂಡು ಬರದ ಕಾರಣ ಯಾವ ಮಕ್ಕಳಿಗೆ ಕೊರೊನಾ ಇದೆ..? ಯಾರಿಗೆ ಇಲ್ಲ ಎಂಬುದನ್ನು ಪತ್ತೆ ಹಚ್ಚುವುದು ಕಷ್ಟವಾಗಿದೆ.
ದೇಶದ ಸುಮಾರು 10 ರಾಜ್ಯಗಳಲ್ಲಿ ಶಾಲೆಗಳನ್ನು ತೆರೆಯಲಾಗಿದೆ. ಏಮ್ಸ್ ವರದಿಯ ಪ್ರಕಾರ, ಪ್ರತಿ 4 ಕೊರೊನಾ ಸೋಂಕಿತ ಮಕ್ಕಳಲ್ಲಿ 3 ಮಕ್ಕಳಿಗೆ ಯಾವುದೇ ರೋಗ ಲಕ್ಷಣವಿಲ್ಲ. ಇದು ಇತರ ಮಕ್ಕಳಿಗೆ ತುಂಬಾ ಅಪಾಯಕಾರಿ. ಈ ಮಕ್ಕಳು ಮತ್ತೊಂದು ಮಗುವಿಗೆ ಬಹಳ ಸುಲಭವಾಗಿ ಸೋಂಕು ತಗುಲಿಸಬಹುದು ಎಂದು ವರದಿಯಲ್ಲಿ ಹೇಳಲಾಗಿದೆ.
ಆಂಧ್ರಪ್ರದೇಶದಲ್ಲಿ 9 ಮತ್ತು 10ನೇ ತರಗತಿ ಶುರುವಾಗಿದೆ. ಶಾಲೆ ಶುರುವಾದ ಮೂರನೇ ದಿನ 262 ವಿದ್ಯಾರ್ಥಿಗಳು ಮತ್ತು 160 ಶಿಕ್ಷಕರು ಕೊರೊನಾ ಸೋಂಕಿಗೆ ಒಳಗಾಗಿದ್ದಾರೆ.