ಉತ್ತರಾಖಂಡ್ನ ನೂತನ ಸಿಎಂ ತಿರಥ್ ಸಿಂಗ್ ರಾವತ್ ಹರಿದ ಜೀನ್ಸ್ ತೊಡುವ ಮಹಿಳೆಯರ ಬಗ್ಗೆ ನೀಡಿದ ಹೇಳಿಕೆ ಭಾರೀ ವಿವಾದಕ್ಕೆ ಕಾರಣವಾಗಿದೆ. ಬುಧವಾರ ಮಕ್ಕಳ ಹಕ್ಕುಗಳ ಸಂರಕ್ಷಣೆ ಕುರಿತು ನಡೆದ ಕಾರ್ಯಾಗಾರದಲ್ಲಿ ತಿರಥ್ ಸಿಂಗ್ ಹರಿದ ಜೀನ್ಸ್ ತೊಡುವ ಮಹಿಳೆಯರು ಸಮಾಜಕ್ಕೆ ಕೆಟ್ಟ ಉದಾಹರಣೆ ಇದ್ದಂತೆ. ಅವರಿಂದ ಸಮಾಜಕ್ಕೆ ಏನು ಸಂದೇಶ ಸಿಗೋಕೆ ಸಾಧ್ಯ ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೇ ವಿದೇಶಿಗರು ಯೋಗಾಭ್ಯಾಸ ಮಾಡುವ ಮೂಲಕ ಭಾರತೀಯ ಸಂಸ್ಕೃತಿಯನ್ನ ತಮ್ಮದಾಗಿಸಿಕೊಳ್ತಿದ್ರೆ ಭಾರತದವರು ಮಾತ್ರ ದೇಹ ಪ್ರದರ್ಶನದತ್ತ ವಾಲುತ್ತಿದ್ದಾರೆ ಎಂದು ಹೇಳಿದ್ದರು.
ಉತ್ತರಾಖಂಡ್ ಸಿಎಂ ಈ ರೀತಿ ಹೇಳಿಕೆ ನೀಡುತ್ತಿದ್ದಂತೆಯೇ ಟ್ವಿಟರ್ನಲ್ಲಿ ತಿರಥ್ ರಾವತ್ ವಿರುದ್ಧ ಅಭಿಯಾನಗಳ ಸುರಿಮಳೆಯೇ ಶುರುವಾಗಿದೆ. #RippedJeansTwitter , #GreetingsFromMyNakedKnee ಎಂಬ ಹ್ಯಾಶ್ಟಾಗ್ಗಳ ಅಡಿಯಲ್ಲಿ ಹರಿದ ಜೀನ್ಸ್ ಧರಿಸಿ ಫೋಟೋ ಶೇರ್ ಮಾಡುತ್ತಿರುವ ಮಹಿಳೆಯರು ನಾವು ಧರಿಸುವ ಉಡುಪು ನಮ್ಮ ಚಾರಿತ್ರ್ಯ ಪ್ರದರ್ಶನ ಮಾಡೋದಿಲ್ಲ ಎಂಬ ಸಂದೇಶವನ್ನ ಸಾರುತ್ತಿದ್ದಾರೆ.