ಚಂಡಿಗಢ: ವಯಸ್ಕ ಜೋಡಿ ಒಟ್ಟಿಗೆ ವಾಸಿಸುವ ಹಕ್ಕನ್ನು ನಿರಾಕರಿಸಲಾಗುವುದಿಲ್ಲ. ಅವರು ವಯಸ್ಕರಾಗಿದ್ದಲ್ಲಿ ಮದುವೆಯಾಗದಿದ್ದರೂ ಒಟ್ಟಿಗೆ ವಾಸಿಸುವ ಹಕ್ಕು ಹೊಂದಿರುತ್ತಾರೆ ಎಂದು ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ತೀರ್ಪು ನೀಡಿದೆ.
ಮದುವೆಯಾಗದ ವಯಸ್ಕ ಜೋಡಿ ಒಟ್ಟಿಗೆ ಬದುಕಬಹುದು. ಅವರು ಕಾನೂನಿನ ಗಡಿಯೊಳಗೆ ಇರುವವರೆಗೂ ಒಟ್ಟಿಗೆ ವಾಸಿಸುವ ಹಕ್ಕನ್ನು ನಿರಾಕರಿಸಲಾಗುವುದಿಲ್ಲವೆಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಒಬ್ಬ ವ್ಯಕ್ತಿಯು ಅವಳ ಅಥವಾ ಅವನ ಜೀವನವನ್ನು ಹೇಗೆ ನಡೆಸಬೇಕು ಎಂಬುದನ್ನು ಸಮಾಜ ನಿರ್ಧರಿಸಲು ಸಾಧ್ಯವಿಲ್ಲ. ಸಂವಿಧಾನ ಪ್ರತಿಯೊಬ್ಬ ವ್ಯಕ್ತಿಯ ಜೀವನ ಹಕ್ಕನ್ನು ಖಾತರಿಪಡಿಸುತ್ತದೆ. ಒಬ್ಬರ ಸಂಗಾತಿಯನ್ನು ಆಯ್ಕೆ ಮಾಡುವ ಸ್ವಾತಂತ್ರ್ಯ ಜೀವನದ ಹಕ್ಕಿನ ಪ್ರಮುಖ ಅಂಶವಾಗಿದೆ ಎಂದು ಹೇಳಲಾಗಿದೆ.
19 ವರ್ಷದ ಹುಡುಗಿ ಮತ್ತು 21 ವರ್ಷದ ಯುವಕ ಪ್ರೀತಿಸಿದ್ದು, ಮದುವೆಯಾಗಲು ಮುಂದಾಗಿದ್ದರು. ಆದರೆ, ಹುಡುಗಿಯ ಪೋಷಕರು ಇದಕ್ಕೆ ಒಪ್ಪದೇ ಆಕೆಯನ್ನು ಕೂಡಿ ಹಾಕಿದ್ದಾರೆ. ಡಿಸೆಂಬರ್ 21 ರಂದು ಮನೆಯಿಂದ ತಪ್ಪಿಸಿಕೊಂಡು ಬಂದ ಹುಡುಗಿ ಹುಡುಗನೊಂದಿಗೆ ವಾಸವಾಗಿದ್ದಾಳೆ. ಆಕೆಯ ಕುಟುಂಬದಿಂದ ಬೆದರಿಕೆ ಇದ್ದ ಕಾರಣ ಯುವಕ ಮತ್ತು ಯುವತಿ ಪೊಲೀಸರ ರಕ್ಷಣೆ ಕೋರಿದ್ದಾರೆ. ನ್ಯಾಯಾಲಯಕ್ಕೆ ಕೂಡ ಮನವಿ ಮಾಡಿದ್ದಾರೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ, ಯುವತಿ ತನ್ನ ಆಯ್ಕೆಯನ್ನು ನಿರ್ಧರಿಸುವುದರಲ್ಲಿ ಖಚಿತವಾಗಿರುವುದನ್ನು ಗಮನಿಸಿ ಅವರು ಒಟ್ಟಿಗೆ ವಾಸಿಸುವ ಹಕ್ಕನ್ನು ನಿರಾಕರಿಸಲಾಗುವುದಿಲ್ಲ ಎಂದು ತಿಳಿಸಿದೆ. ಅವಳು ವಯಸ್ಕಳಾಗಿರುವುದರಿಂದ ಯಾರೊಂದಿಗೆ ತನ್ನ ಜೀವನವನ್ನು ಕಳೆಯಬೇಕೆಂದು ನಿರ್ಧರಿಸುತ್ತಾಳೆ. ಪೋಷಕರು ಮಗಳಿಗೆ ಒತ್ತಾಯಿಸಲು ಆಗುವುದಿಲ್ಲ ಎಂದು ನ್ಯಾಯಮೂರ್ತಿ ಅಲ್ಕಾ ಸರೀನ್ ಅವರ ನ್ಯಾಯಪೀಠ ಆದೇಶ ನೀಡಿದೆ. ಈ ಜೋಡಿ ರಕ್ಷಣೆಗೆ ಮಾಡಿದ ಮನವಿಯನ್ನು ಪರಿಶೀಲಿಸುವಂತೆ ಫತೇಗರ್ ಸಾಹೇಬ್ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಪೀಠ ನಿರ್ದೇಶನ ನೀಡಿದೆ.