ಅಲಿಘಡ ಮುಸ್ಲಿಂ ವಿಶ್ವ ವಿದ್ಯಾಲಯಕ್ಕೆ ಭಾರತೀಯ ವಾಯು ಸೇನೆಯಿಂದ ಕೊಡುಗೆಯಾಗಿ ನೀಡಿದ್ದ ನಿವೃತ್ತ ಯುದ್ಧ ವಿಮಾನ ಮಿಗ್ 23 ಯನ್ನು ಕಿಡಿಗೇಡಿಯೊಬ್ಬ ಒಎಲ್ ಎಕ್ಸ್ ನಲ್ಲಿ ಮಾರಾಟಕ್ಕಿಟ್ಟಿದ್ದಾನೆ.
ವಿಮಾನದ ಫೋಟೋ ಹಾಕಿ ಮಿಕೋಯನ್ ಗುರೆವಿಚ್ ಮಿಗ್ 23ಬಿಎನ್ ಫೈಟರ್ ನ್ನು “ಬೆಸ್ಟ್ ಫೈಟರ್ ಪ್ಲೇನ್” ಎಂದು ಡಿಸ್ಕ್ರಿಪ್ಶನ್ ಬರೆದು 9.9 ಕೋಟಿ ರೂ.ಗೆ ಮಾರಾಟಕ್ಕೆ ಇದೆ ಎಂದು ವೆಬ್ ಸೈಟ್ ನಲ್ಲಿ ಪೋಸ್ಟ್ ಮಾಡಲಾಗಿದೆ.
ಇದು ವೈರಲ್ ಆಗುತ್ತಿದ್ದಂತೆ ಅಲೀಘಡ ಮುಸ್ಲಿಂ ವಿವಿ ಜಿಲ್ಲಾಡಳಿತ ಹಾಗೂ ಪೊಲೀಸ್ ಐಟಿ ಸೆಲ್ ಗೆ ದೂರು ನೀಡಿದೆ. ಇದು ವಿವಿಯಿಂದ ಮಾಡಿದ್ದಲ್ಲ ಯಾವುದೇ ವಸ್ತುಗಳನ್ನು ನಾವು ಮಾರಾಟಕ್ಕಿಟ್ಟಿಲ್ಲ ಎಂದು ವಿವಿ ಸ್ಪಷ್ಟನೆ ನೀಡಿದೆ.
“ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಅಥವಾ ಹಳೆಯ ವಿದ್ಯಾರ್ಥಿ ಈ ಪ್ರಮಾದ ಮಾಡಿದ್ದಲ್ಲ. ವಿವಿ ಗೌರವ ಮಾರಾಟಕ್ಕಿಟ್ಟ ಆರೋಪಿಗಳ ವಿರುದ್ಧ ನಾವು ಕಾನೂನು ಕ್ರಮ ವಹಿಸುತ್ತೇವೆ” ಎಂದು ವಿವಿಯ ಪ್ರಾಧ್ಯಾಪಕ ಮೊಹಮದ್ ವಾಸಿಮ್ ಅಲಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ವಿಮಾನ ಬಿಡಿ ಭಾಗಗಳ ಅಧ್ಯಯನಕ್ಕಾಗಿ ನೈಜ ಯುದ್ಧ ವಿಮಾನವನ್ನು ಹೊಂದಿದ ದೆಹಲಿ ರಾಜ್ಯದ ಏಕೈಕ ಹಾಗೂ ದೇಶದ ಏಳನೇ ವಿವಿ ಎಎಂಯು ವಾಗಿದೆ. 1981 ರಲ್ಲಿ ಭಾರತೀಯ ವಾಯು ಸೇನೆಗೆ ಸೇರಿದ್ದ ಮಿಗ್ 23 ಏರ್ ಕ್ರಾಫ್ಟ್ 28 ವರ್ಷ ಸೇವೆಯ ಬಳಿಕ ನಿವೃತ್ತಿ ಹೊಂದಿತ್ತು. ನಂತರ ವಿವಿಗೆ ದೇಣಿಗೆ ನೀಡಲಾಗಿತ್ತು.