ಹಿಂದಿ ಭಾಷೆ ಬರುವುದಿಲ್ಲ ಎಂಬ ಕಾರಣಕ್ಕೆ ಯಾವುದೇ ಬ್ಯಾಂಕ್ ಸಾಲ ಮಂಜೂರಾತಿಯನ್ನು ತಡೆಹಿಡಿಯಬಹುದೇ ? ಅಥವಾ ಸಾಲವನ್ನೇ ನಿರಾಕರಿಸಬಹುದೇ ?
ತಮಿಳುನಾಡಿನ ಅರಿಯಾಲೂರು ಎಂಬಲ್ಲಿ ಇಂಥದ್ದೇ ಒಂದು ಪ್ರಸಂಗ ನಡೆದಿದ್ದು, ಸಾಲ ಸಿಗದೆ ಮಾನಸಿಕವಾಗಿ ನೊಂದ ನಿವೃತ್ತ ಸರ್ಕಾರಿ ವೈದ್ಯ ಸಿ. ಬಾಲಸುಬ್ರಮಣಿಯನ್ ಎಂಬುವರು ಬ್ಯಾಂಕ್ ವ್ಯವಸ್ಥಾಪಕ ವಿಶಾಲ್ ಕಾಂಬ್ಳೆಗೆ ವಕೀಲರ ಮೂಲಕ ನೋಟಿಸ್ ಕೊಟ್ಟಿದ್ದಾರೆ. ಅಷ್ಟೇ ಅಲ್ಲದೆ, ತಮಗೆ 1 ಲಕ್ಷ ರೂ. ಪರಿಹಾರ ನೀಡಬೇಕೆಂದೂ ಕೋರ್ಟ್ ಮೊರೆ ಹೋಗುವುದಾಗಿ ನೋಟಿಸ್ ನಲ್ಲಿ ಉಲ್ಲೇಖಿಸಿದ್ದಾರೆ.
ಜಯಕೊಂಡಂ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರಾಗಿದ್ದ ಬಾಲಸುಬ್ರಮಣಿಯನ್, 2001 ರಲ್ಲಿ ನಿವೃತ್ತರಾಗಿದ್ದರು. 2002 ರಿಂದ ಗಂಗೈಕೊಂಡಾಚಲಪುರಂ ರಾಷ್ಟ್ರೀಯ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದರು.
ವಾಣಿಜ್ಯ ಕಟ್ಟಡ ಕಟ್ಟುವ ಸಲುವಾಗಿ ಸಾಲ ಪಡೆಯಲು ಬ್ಯಾಂಕ್ ಗೆ ಹೋದಾಗ ಮಹಾರಾಷ್ಟ್ರ ಮೂಲದ ವ್ಯವಸ್ಥಾಪಕ ವಿಶಾಲ್ ಕಾಂಬ್ಳೆ ಹಿಂದಿಯಲ್ಲಿ ಮಾತನಾಡಿದ್ದಾರೆ. ಆದರೆ, ಬಾಲಸುಬ್ರಮಣಿಯನ್ ಗೆ ಹಿಂದಿ ಬಾರದ್ದರಿಂದ ಅರ್ಥವಾಗಿಲ್ಲ. ಇಬ್ಬರ ನಡುವೆ ಸಂವಹನ ಸರಿಯಾಗಿ ಆಗಿಲ್ಲ. ಈ ಕಾರಣಕ್ಕೆ ಘಟನೆ ನಡೆದಿದೆ ಎಂದೂ ಹೇಳಲಾಗುತ್ತಿದೆ.